ಬೆಂಗಳೂರು ನಗರದಲ್ಲಿ ಆಟೋದಲ್ಲಿ ಸಂಚಾರ ನಡೆಸುವ ಜನರಲ್ಲಿ ಹೆಚ್ಚಿನವರು ಮಹಿಳೆಯರಾಗಿದ್ದರು. ಆದರೆ ಈಗ ಉಚಿತವಾಗಿ ಸಂಚಾರ ನಡೆಸಲು ಬಿಎಂಟಿಸಿ ಬಸ್ ಇರುವ ಕಾರಣ ಮಹಿಳೆಯರು ಬಸ್ ಏರುತ್ತಿದ್ದಾರೆ. ಇದರಿಂದಾಗಿ ಆಟೋ ಚಾಲಕರಿಗೆ ಹೊಡೆತ ಬಿದ್ದಿದೆ. ಬೇಕಾಬಿಟ್ಟಿಯಾಗಿ ದರ ಹೇಳುತ್ತಿದ್ದ ಚಾಲಕರು ಈಗ ಪ್ರಯಾಣಿಕರಿಗಾಗಿ ಕಾಯುವ ಪರಿಸ್ಥಿತಿ ಬಂದಿದೆಕರೆದ ಕಡೆ ಬರುವುದಿಲ್ಲ, ಮೀಟರ್ಗಿಂತ ಹೆಚ್ಚಿನ ಹಣ ವಸೂಲಿ ಹೀಗೆ ಸದಾ ಜನರ ಆಕ್ರೋಶಕ್ಕೆ ತುತ್ತಾಗುವ ಆಟೋ ಚಾಲಕರು ಈಗ ‘ಶಕ್ತಿ’ಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೈಕ್ ಟ್ಯಾಕ್ಸಿಯಿಂದಾಗಿ ನಷ್ಟ ಅನುಭವಿಸುತ್ತಿದ್ದ ಆಟೋ ಚಾಲಕರಿಗೆ ಈಗ ಮತ್ತೆ ‘ಶಕ್ತಿ’ ಸಮಸ್ಯೆ ತಂದಿದೆ.ಬೆಂಗಳೂರು, ಜೂನ್ 23: ಮಹಿಳೆಯರು ಸಾಮಾನ್ಯ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಸಂಚಾರ ನಡೆಸುವ ‘ಶಕ್ತಿ’ ಯೋಜನೆ ಜಾರಿಗೆ ಬಂದು ಎರಡು ವಾರಗಳು ಕಳೆಯುತ್ತಾ ಬಂತು. ಬಸ್ಗಳಲ್ಲಿ ಜನರ ದಟ್ಟಣೆ ಹೆಚ್ಚಿದೆ. ಬೆಂಗಳೂರು ನಗರದಲ್ಲಿ ಆಟೋ ಚಾಲಕರ ವಹಿವಾಟಿಗೆ ಹೊಡೆತ ಬಿದ್ದಿದೆ.
.ಪೀಕ್ ಆವರ್ನಲ್ಲಿಯೂ ಕಡಿಮೆ; ನಗರದಲ್ಲಿ ಪೀಕ್ ಅವರ್ನಲ್ಲಿ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ಓಲಾ, ಊಬರ್ ಸೇರಿದಂತೆ ಅಪ್ಲಿಕೇಶನ್ ಆಧಾರಿತ ಆಟೋ ಓಡಿಸುವ ಚಾಲಕರ ಪ್ರಕಾರ ಪೀಕ್ ಅವರ್ನಲ್ಲಿಯೂ ಆಟೋಗಳ ಬುಕ್ಕಿಂಗ್ ಕಡಿಮೆಯಾಗಿದೆ. ದೂರದ ಪ್ರದೇಶಗಳಿಗೆ ಹಿಂದೆ ಸುಲಭವಾಗಿ ಬುಕ್ಕಿಂಗ್ ಸಿಗುತ್ತಿತ್ತು. ಆದರೆ ಈಗ ಮಹಿಳೆಯರು ಬಸ್ ಅವಲಂಬಿಸಿದ್ದಾರೆ.
ಹನುಮಂತನಗರದಲ್ಲಿ ಆಟೋ ಓಡಿಸುವ ದೊರೆಸ್ವಾಮಿ ಅವರ ಪ್ರಕಾರ, “ಪೀಕ್ ಅವರ್ನಲ್ಲಿ ಪ್ರತಿದಿನ 5 ರಿಂದ 6 ಬಾಡಿಗೆ ಅದೂ ದೂರ ಪ್ರಯಾಣದ್ದು ಸಿಗುತ್ತಿತ್ತು. ಈಗ ‘ಶಕ್ತಿ’ ಯೋಜನೆ ಜಾರಿಗೆ ಬಂದ ಬಳಿಕ ದಿನಕ್ಕೆ 2 ಬಾಡಿಗೆ ಸಿಗುವುದೇ ಕಷ್ಟವಾಗಿದೆ” ಎಂದು ಹೇಳಿದರು.
ಈಗಾಗಲೇ ಬೈಕ್ ಟ್ಯಾಕ್ಸಿಯಿಂದಾಗಿ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದೆವು. ಈಗ ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ’ಯಿಂದ ಬಾಡಿಗೆ ಮತ್ತಷ್ಟು ಕಡಿಮೆಯಾಗಿದೆ. ಜೀವನ ನಿರ್ವಹಣೆಗಾಗಿ ನಾವು ಆಟೋ ಪ್ರಯಾಣ ದರಗಳನ್ನು ಏರಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಚಾಲಕರು ನೋವು ತೋಡಿಕೊಂಡಿದ್ದಾರೆ.
ಆದರೆ ಅಪ್ಲಿಕೇಶನ್ ಆಧಾರಿತವಲ್ಲದ ಆಟೋ ಓಡಿಸುವ ಚಾಲಕರ ಪ್ರಯಾಣ ವಹಿವಾಟು ಹೇಳುವಷ್ಟು ಮಟ್ಟಕ್ಕೆ ಕುಸಿದಿಲ್ಲ. ಶಾಲೆ, ಮೆಟ್ರೋ ನಿಲ್ದಾಣ, ಕಾಲೇಜು, ಮಾಲ್ಗಳು ಹೀಗೆ ವಿವಿಧ ಸ್ಥಳಗಳ ಬಳಿ ಹಿಂದಿನಂತೆಯೇ ಬಾಡಿಗೆ ಸಿಗುತ್ತಿದೆ. ಆದರೆ ಆಟೋ ಏರುವ ಮಹಿಳೆಯರ ಸಂಖ್ಯೆ ಕೊಂಚ ಕಡಿಮೆಯಾಗಿದೆ ಎನ್ನುತ್ತಾರೆ.
ಸಾರಿಗೆ ಸಚಿವರ ಭೇಟಿ; ಆದರ್ಶ ಆಟೋ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಸಂಪತ್ ಡೆಕ್ಕರ್ ಹೆರಾಲ್ಡ್ ಜೊತೆ ಮಾತನಾಡಿದ್ದಾರೆ. ಆಟೋ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳು, ‘ಶಕ್ತಿ’ ಯೋಜನೆ ಬಂದ ಬಳಿಕ ಆಗುತ್ತಿರುವ ಹೊಸ ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಆಟೋ ಚಾಲಕರು ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಬೈಕ್ ಟ್ಯಾಕ್ಸಿ ಚಾಲಕರು ಆರೋಪಿಸಿದ್ದಾರೆ. ಕೆಲವು ಮಾರ್ಗದಲ್ಲಿ ಆಟೋದಲ್ಲಿ ಸಂಚಾರ ನಡೆಸಲು 120 ರಿಂದ 140 ರೂ. ಇದೆ. ಆದರೆ ಬೈಕ್ ಟ್ಯಾಕ್ಸಿಯಲ್ಲಿ 80 ರಿಂದ 100 ರೂ. ಇದೆ. ಜನರು ಅವರಿಗೆ ಇಷ್ಟ ಬಂದ ಸಾರಿಗೆಯಲ್ಲಿ ಸಂಚಾರ ನಡೆಸಲಿ. ಆಟೋದಲ್ಲಿಯೇ ಬರಬೇಕು ಎಂಬ ನಿಲುವು ಚಾಲಕರದ್ದು ಏಕೆ? ಎಂದು ಪ್ರಶ್ನೆ ಮಾಡಿದ್ದಾರೆ.
“ಕೋವಿಡ್ ಪರಿಸ್ಥಿತಿ ಬಳಿಕ ವಹಿವಾಟು ಸ್ಪಲ್ಪ ಸುಧಾರಿಸಿತ್ತು. ಆದರೆ ನಗರದಲ್ಲಿ ಬೈಕ್ ಟ್ಯಾಕ್ಸಿಗಳಿಂದ ಮತ್ತೆ ತೊಂದರೆ ಉಂಟಾಗಿತ್ತು. ಈಗ ‘ಶಕ್ತಿ’ ಯೋಜನೆಯಿಂದಾಗಿ ಮತ್ತೆ ನಷ್ಟವಾಗುತ್ತಿದೆ. ನಾವು ಸಹ ಜೀವನ ನಿರ್ವಹಣೆ ಮಾಡಬೇಕಿದೆ, ಸಾಲಗಳನ್ನು ಕಟ್ಟಬೇಕಿದೆ” ಎಂದು ಹೇಳಿದ್ದಾರೆ.
ನಗರದಲ್ಲಿ ಬೈಕ್ ಟ್ಯಾಕ್ಸಿಗಳು ಪ್ರಸಿದ್ಧಿಯಾಗುತ್ತಿವೆ. ಆಟೋ ಚಾಲಕರ ಸಂಘಟನೆಗಳ ಪದಾಧಿಕಾರಿಗಳು ಜೂನ್ 16ರಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯನ್ನು ಭೇಟಿ ಮಾಡಿ ಆಗುತ್ತಿರುವ ಸಮಸ್ಯೆ ಬಗ್ಗೆ ವಿವರಣೆ ನೀಡಿದ್ದಾರೆ. ಬೈಕ್ ಟ್ಯಾಕ್ಸಿಗಳಿಗೆ ಕಡಿವಾಣ ಹಾಕಬೇಕು ಎಂದು ಸಹ ಮನವಿ ಮಾಡಿದ್ದಾರೆ.