ಮಂಗಳೂರು: ಬಂಡೆಕಲ್ಲು ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ
ಇಂದು ಮತ್ತು ನಾಳೆ ಮಂಗಳೂರು – ಬೆಂಗಳೂರು ನಡುವಿನ ರೈಲು ಓಡಾಟವನ್ನು ಸ್ಥಗಿತಗೊಳಿಸಲಾಗಿದೆ.
ಶಿರಾಡಿ ಘಾಟ್ ರೈಲು ಮಾರ್ಗದ ಸಿರಿಬಾಗಿಲು ಸಮೀಪದ ಮಣಿಭಂಡ ಬಳಿ ರೈಲು ಹಳಿಗಳ ಬಳಿಯಲ್ಲಿ ಅಪಾಯಕಾರಿ ಬಂಡೆ ಬಿದ್ದಿದೆ. ಇದನ್ನು ತೆರವುಗೊಳಿಸುವ ಸಲುವಾಗಿ ಎರಡು ದಿನ ರೈಲು ಸಂಚಾರ ಸ್ಥಗಿತಗೊಳಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ.
ಘಾಟಿ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಜತೆಗೆ ಈ ಅಪಾಯಕಾರಿ ಬಂಡೆ ಯಾವುದೇ ಕ್ಷಣದಲ್ಲಿ ರೈಲು ಹಳಿಯ ಮೇಲೆ ಉರುಳಿ ಬಿಳುವ ಸಾಧ್ಯತೆ ಇದೆ. ಹೀಗಾಗಿ ಅಪಾಯ ಸಂಭವಿಸುವ ಮುನ್ನವೇ ರೈಲ್ವೇ ಇಲಾಖೆ ಎಚ್ಚೆತ್ತಿದ್ದು, ಬಂಡೆ ತೆರವಿಗೆ ಸಿದ್ದತೆ ನಡೆಸಿದೆ. ಕಳೆದ ವರ್ಷದ ಮಳೆಗಾಲದಲ್ಲಿ ಭಾರಿ ಮಳೆಗೆ ಸುಬ್ರಹ್ಮಣ್ಯ – ಸಿರಿಬಾಗಿಲು ನಡುವಿನ ಕಿಲೋ ಮೀಟರ್ 86ರ ಹಳಿಯ ಮೇಲೆ ಭೂ ಕುಸಿತ ಸಂಭವಿಸಿತ್ತು.
ಈ ವೇಳೆ 110 ಮೀ. ದೂರದಲ್ಲಿ 25 ಮೀಟರ್ ಎತ್ತರಕ್ಕೆ ಮಣ್ಣು ಬಿದ್ದು, ಸುರಂಗದ ಪ್ರವೇಶ ದ್ವಾರ ಮಣ್ಣು ಮುಚ್ಚಿತ್ತು.