ಲೈವ್ ಸ್ಟ್ರೀಮಿಂಗ್ ಸಮಯದಲ್ಲಿ ಕೊರಿಯನ್ ಮಹಿಳಾ ಯೂಟ್ಯೂಬರ್ ಗೆ ಕಿರುಕುಳ: ಆರೋಪಿಗಳ ಬಂಧನ

ಮುಂಬೈ: ಲೈವ್ ಸ್ಟ್ರೀಮಿಂಗ್ ಸಮಯದಲ್ಲಿ ಕೊರಿಯಾದ ಮಹಿಳಾ ಯೂಟ್ಯೂಬರ್‌ಗೆ ಕಿರುಕುಳ ನೀಡಿದ್ದಕ್ಕಾಗಿ ಮೊಬೀನ್ ಚಂದ್ ಮೊಹಮ್ಮದ್ ಶೇಖ್ ಮತ್ತು ಮೊಹಮ್ಮದ್ ನಕೀಬ್ ಸದ್ರೇಲಂ ಅನ್ಸಾರಿ ಎಂಬಿಬ್ಬರನ್ನು ಬಂಧಿಸಲಾಗಿದೆ.

ಖಾರ್ ಪೊಲೀಸರು ಎಫ್‌ಐಆರ್ ಯು/ಎಸ್ 354 ಐಪಿಸಿ ದಾಖಲಿಸಿ ಇಬ್ಬರನ್ನೂ ಬಂಧಿಸಿದ್ದಾರೆ.

ಕೊರಿಯಾದ ಯೂಟ್ಯೂಬರ್‌ ಮಹಿಳೆಯೊಬ್ಬರು ಮುಂಬೈನ ಬೀದಿಗಳಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದ ಸಂದರ್ಭ ಮೊಬೀನ್ ಚಂದ್ ಮೊಹಮ್ಮದ್ ಶೇಖ್ ಮತ್ತು ಮೊಹಮ್ಮದ್ ನಕೀಬ್ ಸದ್ರೇಲಂ ಅನ್ಸಾರಿ ಸಾರ್ವಜನಿಕವಾಗಿ ಲೈಂಗಿಕ ಕಿರುಕುಳ ನೀಡುವುದು, ಮಹಿಳೆಯ ಕೈಯನ್ನು ಬಲವಂತವಾಗಿ ಎಳೆದು ತಮ್ಮ ದ್ವಿಚಕ್ರವಾಹನದಲ್ಲಿ ಕುಳ್ಳಿರಿಸಲು ಮತ್ತು ಆಕೆಯನ್ನು ಚುಂಬಿಸಲು ಪ್ರಯತ್ನಿಸುವುದು ಮಹಿಳೆಯ ಕೈಯಲ್ಲಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಎಚ್ಚೆತ್ತ ಪೊಲೀಸ್ ಇಲಾಖೆ ಮಹಿಳೆಗೆ ಕಿರುಕುಳ ನೀಡಿದ ಇಬ್ಬರನ್ನೂ ಬಂಧಿಸಿದೆ. ಆರೋಪಿಗಳನ್ನು 1 ದಿನದ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಈ ಒಂದು ಕೆಟ್ಟ ಘಟನೆಯು ನನ್ನ ಸಂಪೂರ್ಣ ಪ್ರಯಾಣವನ್ನು ಹಾಳುಮಾಡಲು ಮತ್ತು ಇತರ ದೇಶಗಳಿಗೆ ಅದ್ಭುತವಾದ ಭಾರತವನ್ನು ತೋರಿಸುವ ನನ್ನ ಉತ್ಸಾಹವನ್ನು ಹಾಳುಮಾಡಲು ನಾನು ಬಯಸುವುದಿಲ್ಲ. ಬೇರೆ ದೇಶದಲ್ಲಿಯೂ ನನಗೆ ಈ ರೀತಿ ಅನುಭವವಾಗಿದೆ ಆದರೆ ಆ ಸಮಯದಲ್ಲಿ ನಾನು ಪೊಲೀಸರಿಗೆ ಕರೆ ಮಾಡಲು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಭಾರತದಲ್ಲಿ, ಕ್ರಮಗಳನ್ನು ತ್ವರಿತವಾಗಿ ತೆಗೆದುಕೊಳ್ಳಲಾಗುತ್ತಿದೆ. ನಾನು 3 ವಾರಗಳಿಗೂ ಹೆಚ್ಚು ಸಮಯದಿಂದ ಮುಂಬೈನಲ್ಲಿದ್ದೇನೆ, ಇನ್ನೂ ಹೆಚ್ಚು ಸಮಯ ಉಳಿಯಲು ಯೋಜಿಸುತ್ತಿದ್ದೇನೆ ಎಂದು ಲೈವ್ ಸ್ಟ್ರೀಮಿಂಗ್ ಮಾಡುವಾಗ ಮುಂಬೈನಲ್ಲಿ ಕಿರುಕುಳಕ್ಕೊಳಗಾದ ದಕ್ಷಿಣ ಕೊರಿಯಾದ ಯೂಟ್ಯೂಬರ್ ಹ್ಯೋಜಿಯಾಂಗ್ ಪಾರ್ಕ್ ಎ.ಎನ್.ಐ ಗೆ ಹೇಳಿದ್ದಾರೆ.