ಗೃಹಲಕ್ಷ್ಮಿ ಯೋಜನೆಗೆ ಚಾಲನೆ: ಜಿಲ್ಲೆಯಲ್ಲಿ 2.58 ಲಕ್ಷ ಫಲಾನುಭವಿಗಳು

ಉಡುಪಿ: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿಯವರ ಸೂಚನೆ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಗೃಹಲಕ್ಷ್ಮಿ ನೋಂದಣಿ ಪ್ರಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲಾ ವ್ಯಾಪ್ತಿಯ ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆ ಎಂದು ಗುರುತಿಸಿರುವ ಮಹಿಳೆ ಈ ಯೋಜನೆಗೆ ಅರ್ಹರು. ಯಜಮಾನಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿ.ಎಸ್.ಟಿ ಪಾವತಿದಾರರಾಗಿದ್ದರೆ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ. ಲಿಂಗತ್ವ ಅಲ್ಪಸಂಖ್ಯಾತರು ಈ ಯೋಜನೆಯ ಲಾಭ ಪಡೆಯಬಹುದು. ಜಿಲ್ಲೆಯಲ್ಲಿ ಒಟ್ಟಾರೆ 2,58,765 ಪಡಿತರ ಚೀಟಿದಾರರಿದ್ದು, 27,682 ಅಂತ್ಯೋದಯ, 1,62,734 ಬಿ.ಪಿ.ಎಲ್ ಹಾಗೂ 68,349 ಎ.ಪಿ.ಎಲ್ ಕಾರ್ಡ್ ಹೊಂದಿದವರಿದ್ದಾರೆ.

ಜಿಲ್ಲೆಯಲ್ಲಿ ಯೋಜನೆಗೆ 181 ಗ್ರಾಮ ಒನ್, 155 ಬಾಪೂಜಿ ಸೇವಾ ಕೇಂದ್ರ, 11 ಕರ್ನಾಟಕ ಒನ್, 19 ವಾರ್ಡ್ ಕಚೇರಿ ಸೇರಿದಂತೆ ಒಟ್ಟು 366 ಸೇವಾ ಕೇಂದ್ರಗಳನ್ನು ಏಳು ತಾಲೂಕುಗಳಲ್ಲಿ ಗುರುತಿಸಲಾಗಿದ್ದು, ಫಲಾನುಭವಿಗಳು ಸದರಿ ಕೇಂದ್ರಗಳಿಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ನೋಂದಣಿ ಪ್ರಕ್ರಿಯೆ: ಫಲಾನುಭವಿ ನೊಂದಣಿ ಪ್ರಕ್ರಿಯೆ ಎರಡು ವಿಧಾನದ ಮೂಲಕ ಮಾಡಲಾಗುತ್ತಿದೆ. ಮೊದಲನೆಯದಾಗಿ ಈಗಾಗಲೇ ಪಡಿತರ ಚೀಟಿಯಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಯ ಮೊಬೈಲ್ ಸಂಖ್ಯೆಗೆ ನೋಂದಣಿ ದಿನಾಂಕ, ಸಮಯ ಹಾಗೂ ನೊಂದಣಿ ಕೇಂದ್ರದ ವಿವರಗಳನ್ನು ಎಸ್.ಎಂ.ಎಸ್. ಮೂಲಕ ತಿಳಿಸಲಾಗುತ್ತದೆ. ಇದಲ್ಲದೆ ಟೋಲ್ ಫ್ರೀ ಸಂಖ್ಯೆ 1902ಗೆ ಕಾಲ್ ಮಾಡಿ ಅಥವಾ 8147500500 ಮೋಬೈಲ್ ಸಂಖ್ಯೆಗೆ ಎಸ್.ಎಂ.ಎಸ್. ಮೂಲಕ ಸಂದೇಶ ಕಳುಹಿಸಿ ನೋಂದಣಿ ಕುರಿತು ಮಾಹಿತಿ ಪಡೆಯಬಹುದಾಗಿದೆ. ಎರಡನೇ ವಿಧಾನವಾಗಿ ಪ್ರಜಾಪ್ರತಿನಿಧಿ (ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂ ಸೇವಕರು) ಫಲಾನುಭವಿಗಳ ಮನೆಗೆ ಭೇಟಿ ನೀಡಲಿದ್ದು, ಅವರಿಂದಲೂ ಸಹ ಸ್ಥಳದಲ್ಲಿಯೇ ನೊಂದಾಯಿಸಿಕೊಳ್ಳಬಹುದಾಗಿದೆ. ಒಂದು ವೇಳೆ ನಿಗದಿಪಡಿಸಿದ ದಿನಾಂಕ ಮತ್ತು ಸಮಯದಂದು
ಗ್ರಾಮ ಒನ್, ಬಾಪೂಜಿ ಕೇಂದ್ರ, ಕರ್ನಾಟಕ ಒನ್ ಕೇಂದ್ರಗಳಿಗೆ ಹೋಗಲು ಸಾಧ್ಯವಾಗದೆ ಇದ್ದಲ್ಲಿ ಅದೇ ಸೇವಾ ಕೇಂದ್ರಗಳಿಗೆ ಮುಂದಿನ ಯಾವುದೇ ದಿನಾಂಕದಂದು ಸಂಜೆ 5 ರಿಂದ 7 ಗಂಟೆಯೊಳಗೆ ಭೇಟಿ ನೀಡಿ ನೊಂದಾಯಿಸಿಕೊಳ್ಳಬಹುದಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಫಲಾನುಭವಿಗಳು ಗ್ರಾಮದ ಸಮೀಪವಿರುವ ಗ್ರಾಮ ಒನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ ಮತ್ತು ನಗರ ಪ್ರದೇಶದಲ್ಲಿ ವಾಸಿಸುವ ಫಲಾನುಭವಿಗಳು ಸಮೀಪದ ಕರ್ನಾಟಕ ಒನ್, ವಾರ್ಡ ಕಛೇರಿ, ಸ್ಥಳಿಯ ನಗರಾಡಳಿತ ಸಂಸ್ಥೆಯ ಕಛೇರಿ, ಗೃಹಲಕ್ಷ್ಮೀ ನೋಂದಣಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಬೇಕಾಗುವ ದಾಖಲೆ : ಈ ಯೋಜನೆಯಡಿ ನೊಂದಾಯಿಸಿಕೊಳ್ಳಲು ಪಡಿತರ ಚೀಟಿ ಸಂಖ್ಯೆ, ಫಲಾನುಭವಿ ಮತ್ತು ಪತಿಯ ಆಧಾರ್ ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆ ಪಾಸ್ ಬುಕ್ (ಆಧಾರ ನಂಬರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಹೊರತುಪಡಿಸಿ ಪರ್ಯಾಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಬಯಸಿದ್ದಲ್ಲಿ, ಸದರಿ ಬ್ಯಾಂಕ್ ಖಾತೆಯ ಪಾಸ್ ಬುಕ್) ಮಾಹಿತಿ ಅಗತ್ಯವಿದ್ದು, ನೋಂದಣಿ ಕೇಂದ್ರಕ್ಕೆ ಈ ಎಲ್ಲಾ ಮಾಹಿತಿಗಳೊಂದಿಗೆ ಹಾಜರಾಗಬೇಕು.

2000 ರೂ. ಖಚಿತ: ಗ್ರಾಮ-ಒನ್, ಬಾಪೂಜಿ ಕೇಂದ್ರ, ಕರ್ನಾಟಕ ಒನ್ ಕೇಂದ್ರಗಳಲ್ಲಿ ನೊಂದಾಯಿಸಿಕೊಂಡಾಗ ಮಂಜೂರಾತಿ ಪತ್ರವನ್ನು ಸ್ಥಳದಲ್ಲಿಯೇ ನೀಡಲಾಗುತ್ತದೆ. ಪ್ರಜಾಪ್ರತಿನಿಧಿ ಮೂಲಕ ನೊಂದಾಯಿಸಿಕೊಂಡಲ್ಲಿ ಮಂಜೂರಾತಿ ಪತ್ರ ತದನಂತರ ಮನೆಗೆ ತಲುಪಿಸಲಾಗುತ್ತದೆ. ಇದಲ್ಲದೆ ನೋಂದಣಿ ನಂತರ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್. ಮೂಲಕ ಮಂಜೂರಾತಿ ಬಗ್ಗೆ ಸಂದೇಶ ಸಹ ಬರಲಿದೆ. ನೋಂದಣಿ ನಂತರ ಆಧಾರ ಜೋಡಣೆಯಾಗಿರುವ ಫಲಾನುಭವಿಯ ಖಾತೆಗೆ ಡಿ.ಬಿ.ಟಿ. ಮತ್ತು ಆಧಾರ್ ಜೋಡಣೆಯಾಗದ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್. ಮೂಲಕ ಮಾಹೆಯಾನ 2,000 ರೂ. ಗಳನ್ನು ಜಮೆ ಮಾಡಲಾಗುತ್ತದೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಜವಾಬ್ದಾರಿ: ಜಿಲ್ಲೆಯಲ್ಲಿ ಒಟ್ಟು 1222 ಅಂಗನವಾಡಿ ಕೇಂದ್ರಗಳಲ್ಲಿ ಪ್ರಸ್ತುತ 1202 ಅಂಗನವಾಡಿ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸುತ್ತಿದ್ದು, ಅಂಗನವಾಡಿ ಕೇಂದ್ರದ ವ್ಯಾಪ್ತಿಯ ಗೃಹಲಕ್ಷ್ಮಿ ಯೋಜನೆಯಡಿ ಅರ್ಹರಿರುವ ಎಲ್ಲಾ ಫಲಾನುಭವಿಗಳ ಮನೆ ಭೇಟಿ ಮಾಡಿ ವೇಳಾ ಪಟ್ಟಿಯ ಪ್ರಕಾರ ನೋಂದಣಿ ಕಾರ್ಯದ ಜವಾಬ್ದಾರಿಯನ್ನು ನೀಡಿ ಎಲ್ಲಾ ಅರ್ಹ ಫಲಾನುಭವಿಗಳನ್ನು ನೋಂದಣಿ ಮಾಡಿಸುವಂತೆ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ ನೀಡಲಾಗಿದೆ.

ಸಹಾಯವಾಣಿ ವಿವರ: ಗೃಹಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ಸಹಾಯವಾಣಿ ಆರಂಭಿಸಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ, ಉಡುಪಿ ಮೊ.ನಂ: 9448964337, ದೂ.ಸಂಖ್ಯೆ: 0820-2574978, 2574902 ಅಥವಾ ಉಡುಪಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೊ.ನಂ: 9449940551, ದೂ.ಸಂಖ್ಯೆ:0820-2524055, ಕಾರ್ಕಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೊ.ನಂ: 9480076286, ದೂ.ಸಂಖ್ಯೆ: 08258- 230992, ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೂ.ಸಂಖ್ಯೆ: 0820-2562244 ಹಾಗೂ ಕುಂದಾಪುರ ಶಿಶು ಅಭಿವೃದ್ಧಿ
ಯೋಜನಾಧಿಕಾರಿ 9449142216, ದೂ.ಸಂಖ್ಯೆ: 08254-230807 ಕಚೇರಿಯನ್ನು ಅಥವಾ ಹೆಚ್ಚಿನ ಮಾಹಿತಿಗಾಗಿ ಹತ್ತಿರವಿರುವ ಗ್ರಾಮ ಒನ್ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್ ಕೇಂದ್ರ, ನಗರ ಸ್ಥಳೀಯ ಸಂಸ್ಥೆಗಳು ಸ್ಥಾಪಿಸಿದ ಕೇಂದ್ರಗಳು, ಅಂಗನವಾಡಿ ಕೇಂದ್ರ ಹಾಗೂ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರ ಕಚೇರಿ, ತಾಲೂಕ ಪಂಚಾಯತ್ ಕಚೇರಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಯ
ಕಚೇರಿಗಳನ್ನು ಹಾಗೂ ಯೋಜನೆಯ ಕುರಿತಂತೆ ಸಂದೇಹ ಅಥವಾ ಕುಂದುಕೊರತೆಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ: 1902ಗೆ ಸಂಪರ್ಕಿಸಬಹುದಾಗಿದೆ.

ಅರ್ಜಿ ಸಲ್ಲಿಕೆಯು ಸಂಪೂರ್ಣ ಉಚಿತವಾಗಿದ್ದು, ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕ, ಯಾವುದೇ ಶುಲ್ಕ ಇರುವುದಿಲ್ಲ.