ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ: ಉಡುಪಿಯಲ್ಲಿ ನಾಳೆ 19 ನೇ ಶಾಖೆ ಉದ್ಘಾಟನೆ

ಉಡುಪಿ: ಉಡುಪಿಯ ವಿದ್ಯಾ ಸಮುದ್ರ ರಸ್ತೆಯಲ್ಲಿರುವ ವಿಠಲ್ ಆರ್ಕೆಡ್ ನ, 1ನೇ ಮಹಡಿಯಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ 19ನೇ ಶಾಖೆಯನ್ನು ಜ.4 ರಂದು ಬುಧವಾರ ಬೆಳಿಗ್ಗೆ 11:30ಕ್ಕೆ ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿಯವರು ಉದ್ಘಾಟಿಸಲಿದ್ದಾರೆ.

ಸಾಧ್ವಿ ಶ್ರೀ ಮಾತಾನಂದಮಯಿ ಅವರ ಉಪಸ್ಥಿತಿಯಲ್ಲಿ ಶಾಸಕ ಕೆ. ರಘುಪತಿ ಭಟ್, ಮಾಜಿ ಶಾಸಕ ವಿನಯ ಕುಮಾರ್ ಸೊರಕೆ, ಉಡುಪಿ ನಗರ ಸಭಾಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಮಹಾಮಂಡಳದ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಕರಾಸೌಸಂಸನಿ ಎಚ್. ಕೆ. ಮಂಜುನಾಥ್ ಭಾಗವಹಿಸಲಿರುವರು ಎಂದು ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ. ಸುರೇಶ್ ರೈ ತಿಳಿಸಿದ್ದಾರೆ.

2011ರಲ್ಲಿ ಗುರುದೇವಾನಂದ ಸ್ವಾಮೀಜಿಯವರಿಂದ ಸಹಕಾರಿಯು ಸ್ಥಾಪನೆಗೊಂಡಿದೆ. ದ.ಕ. ಜಿಲ್ಲೆಯಾದ್ಯಂತ 18 ಶಾಖೆಗಳ ಮೂಲಕ ಸುಮಾರು 28,303 ಸದಸ್ಯರಿಂದ 375.81 ಕೋಟಿ ರೂ. ವ್ಯವಹಾರವನ್ನು ದಾಖಲಿಸಿಕೊಂಡು 231.47 ಕೋಟಿ ರೂ. ಠೇವಣಿ, 158.49 ಕೋಟಿ ರೂ. ಸಾಲ ಹಾಗೂ 244.64 ಕೋಟಿ ರೂ. ದುಡಿಯುವ ಬಂಡವಾಳ ಮತ್ತು 2.58 ಕೋಟಿ ರೂ. ಲಾಭ ದಾಖಲಿಸಿಕೊಂಡು ತನ್ನ ಸದಸ್ಯರಿಗೆ ನಿರಂತರ 10 ವರ್ಷಗಳಿಂದ ಶೇ. 15 ಡಿವಿಡೆಂಡ್ ವಿತರಿಸುತ್ತ ಬಂದಿದೆ. ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಡೆಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಮೂಲಕ ಸ್ವ-ಸಹಾಯ ಗುಂಪುಗಳನ್ನು ರಚಿಸಿಕೊಂಡು ಒಟ್ಟು 6,300 ಗುಂಪುಗಳಲ್ಲಿ ಸುಮಾರು 52,000 ಸದಸ್ಯರನ್ನು ಹೊಂದಿದೆ. ಸುಮಾರು 125ಕ್ಕಿಂತ ಹೆಚ್ಚಿನ ರೈತರ ತೋಟಗಳಲ್ಲಿ 1,750ಕ್ಕೂ ಹೆಚ್ಚಿನ ರೈತರಿಗೆ ಕೃಷಿ ಕೌಶಲ ಅಭಿವೃದ್ಧಿ ತರಬೇತಿಯನ್ನು ವಿವಿಧ ಸಂಸ್ಥೆಗಳ ಮೂಲಕ ನೀಡುತ್ತ ಬಂದಿದೆ ಎಂದು ಅವರು ತಿಳಿಸಿದ್ದಾರೆ.