ಕಲಬುರಗಿ: ಯುವನಿಧಿ ಯೋಜನೆಗೆ ಕಳೆದ 7 ದಿನಗಳಲ್ಲಿ ರಾಜ್ಯಾದ್ಯಂತ 19,392 ಮಂದಿ ಯುವಕರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವ ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಕಾಂಗ್ರೆಸ್ನ ಐದನೇ ಗ್ಯಾರಂಟಿ ಯುವ ನಿಧಿಯ ನೋಂದಣಿಯನ್ನು ಡಿಸೆಂಬರ್ 26 ರಂದು ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು.
ಯುವ ನಿಧಿ ಅಡಿಯಲ್ಲಿ, 2023 ರಲ್ಲಿ ತಮ್ಮ ಪದವಿ ಮತ್ತು ಡಿಪ್ಲೊಮಾವನ್ನು ಪೂರ್ಣಗೊಳಿಸಿದ ನಂತರ ನಿರುದ್ಯೋಗಿಗಳಾಗಿ ಉಳಿದಿರುವ ಯುವಕರು ಎರಡು ವರ್ಷಗಳವರೆಗೆ ಅಥವಾ ಅವರು ಉದ್ಯೋಗ ಪಡೆಯುವವರೆಗೆ ಕ್ರಮವಾಗಿ ರೂ 3,000 ಮತ್ತು ರೂ 1,500 ರ ಮಾಸಿಕ ನಿರುದ್ಯೋಗ ಭತ್ಯೆಯನ್ನು ಪಡೆಯುತ್ತಾರೆ.
ಜನವರಿ 12ರಂದು (ವಿವೇಕಾನಂದ ಜಯಂತಿ) ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾವಣೆ ಆಗಲಿದೆ. ಸುಮಾರು 1 ಲಕ್ಷ ಯುವಕರು ಈ ಯೋಜನೆಗೆ ನೋಂದಾಯಿಸಿಕೊಳ್ಳುವ ನಿರೀಕ್ಷೆಯಿದ್ದು, ಇದೇ ಜನವರಿ 12 ರಂದು ಶಿವಮೊಗ್ಗದಲ್ಲಿ ನಡೆಯುವ ಬಿಡುಗಡೆ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸುವ ಸಾಧ್ಯತೆಯಿದೆ ಎಂದು ಡಾ.ಪಾಟೀಲ್ ಹೇಳಿದ್ದಾರೆ.