ನವದೆಹಲಿ: ಭಾರತದಿಂದ 192,000 ಕೆಜಿ ಹಸುವಿನ ಸಗಣಿ ಕುವೈತ್‌ಗೆ ರಫ್ತಾಗುತ್ತಿದ್ದು, ಸಾವಯವ ಕೃಷಿಗಾಗಿ ಕುವೈತ್‌ಗೆ ಸಗಣಿ ಕಳುಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಜೂನ್ 15 ಬುಧವಾರದಂದು ಕನಕಪುರ ರೈಲು ನಿಲ್ದಾಣದಿಂದ ಮೊದಲ ಬ್ಯಾಚ್ ನ ಸಗಣಿ ಕುವೈತ್‌ಗೆ ಹೊರಟಿದೆ. ಕಸ್ಟಮ್ಸ್ ಇಲಾಖೆಯ ಉಸ್ತುವಾರಿಯಲ್ಲಿ ಸಗಣಿ ಪೊಟ್ಟಣ ಕಟ್ಟುವ ಕಾರ್ಯ ನಡೆಯುತ್ತಿದೆ ಎಂದು ವರದಿಯಾಗಿದೆ.
ಜೈಪುರದ ಗೋಶಾಲೆಯಿಂದ ಸಗಣಿ ಕಳುಹಿಸಲಾಗುತ್ತಿದ್ದು, ಕುವೈತ್ ನ ಖಾಸಗಿ ಕಂಪನಿಯೊಂದಕ್ಕೆ ಸಗಣಿಯನ್ನು ರಫ್ತು ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಉಭಯ ದೇಶಗಳ ನಡುವೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.ದೇಶಾದ್ಯಂತ ಸಗಣಿ ಕುರಿತು ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ, ಹಸುವಿನ ಸಗಣಿ ಬಳಸಿ ಬೆಳೆದ ಬೆಳೆಗಳನ್ನು ತಿನ್ನುವುದರಿಂದ ವಿವಿಧ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದು ಹಲವಾರು ಅಧ್ಯಯನಗಳು ಹೇಳಿವೆ. ಕುವೈತ್ ನಲ್ಲೂ ಹಸುವಿನ ಸಗಣಿ ಬಳಸಿ ಸಾವಯವ ಕೃಷಿ ಮಾಡುವ ಸಂಶೋಧನೆ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಕುವೈತ್ ಶುಷ್ಕ ವಾತಾವರಣ ಮತ್ತು ಸಾಕಷ್ಟು ನೀರಿನ ಕೊರತೆ ಇರುವುದರಿಂದ ಕೃಷಿ ಕೆಲಸ ಬಹಳ ಕಷ್ಟ. ಹಾಗಾಗಿ ಹಸುವಿನ ಸಗಣಿ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿಯತ್ತ ಕುವೈತ್ ಗಮನ ಹರಿಸಿದೆ.