ಜೈಪುರ: ಕೇರಳದ 19 ವರ್ಷದ ಕಾಜಿಯಾ ಲಿಜ್ ಮೆಜೊ (Kaziah Liz Mejo) ಅವರು ಪ್ರತಿಷ್ಠಿತ ಮಿಸ್ ಯೂನಿವರ್ಸ್ ಇಂಡಿಯಾ 2026 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಭಾನುವಾರ ಜೈಪುರದ ಜೀ ಸ್ಟುಡಿಯೋದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ 52 ಫೈನಲಿಸ್ಟ್ಗಳನ್ನು ಹಿಂದಿಕ್ಕಿ ಕಾಜಿಯಾ ಪ್ರಶಸ್ತಿ ಗೆದ್ದಿದ್ದಾರೆ.
ಮಿಸ್ ಯೂನಿವರ್ಸ್ ಇಂಡಿಯಾ 2025ರ ವಿಜೇತೆ ಮಣಿಕಾ ವಿಶ್ವಕರ್ಮ ಅವರು ಗ್ರ್ಯಾಂಡ್ ಫಿನಾಲೆ ವೇಳೆ ಕಾಜಿಯಾ ಅವರಿಗೆ ಕಿರೀಟ ತೊಡಿಸಿ, ತಮ್ಮ ಉತ್ತರಾಧಿಕಾರಿಗೆ ಪ್ರಶಸ್ತಿ ಹಸ್ತಾಂತರಿಸಿದರು.
ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತ ಪ್ರತಿನಿಧಿಸಲಿರುವ ಕಾಜಿಯಾ
ನವೆಂಬರ್ನಲ್ಲಿ ಪೋರ್ಟೊ ರಿಕೊದಲ್ಲಿ ನಡೆಯಲಿರುವ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಕಾಜಿಯಾ ಲಿಜ್ ಮೆಜೊ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ವಿಜಯದ ಬಳಿಕ ಮಾತನಾಡಿದ ಕಾಜಿಯಾ, “ನಾನು ಈಗ ಜಗತ್ತಿನ ಅತ್ಯಂತ ಎತ್ತರದ ಸ್ಥಾನದಲ್ಲಿದ್ದೇನೆ ಎಂಬ ಭಾವನೆ ಬರುತ್ತಿದೆ. ಇದು ಅಪ್ರತಿಮ ಕ್ಷಣ. ಮೂರು ವರ್ಷಗಳಿಗೂ ಹೆಚ್ಚು ಕಾಲ ಈ ಕ್ಷಣಕ್ಕಾಗಿ ಶ್ರಮಿಸಿದ್ದೇನೆ. ನನ್ನ ಊರನ್ನು ಜಗತ್ತಿಗೆ ಪರಿಚಯಿಸುವ ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ. ಈ ಕಿರೀಟವನ್ನು ನನ್ನ ಕೇರಳಕ್ಕೆ ತರುತ್ತಿರುವುದಕ್ಕೆ ಹೆಮ್ಮೆ ಇದೆ” ಎಂದು ಹೇಳಿದ್ದಾರೆ.
ಭಾರತಕ್ಕೆ ಮಿಸ್ ಯೂನಿವರ್ಸ್ ಕಿರೀಟ ತರುವ ಕನಸು
ತಮ್ಮ ಭವಿಷ್ಯದ ಗುರಿಯ ಕುರಿತು ಮಾತನಾಡಿದ ಕಾಜಿಯಾ, “ಭಾರತಕ್ಕೆ ಮಿಸ್ ಯೂನಿವರ್ಸ್ ಕಿರೀಟ ತರುವುದು ನನ್ನ ಮೊದಲ ಕನಸು. ಅದು ಯಾವಾಗಲೂ ನನ್ನ ಜೀವನದ ದೊಡ್ಡ ಗುರಿಯಾಗಿದೆ. ನಾನು ಮಾಡುವ ಪ್ರತಿಯೊಂದು ಕೆಲಸದಲ್ಲೂ ಭಾರತ ಮತ್ತು ಕೇರಳವನ್ನು ಪ್ರತಿನಿಧಿಸಲು ಬಯಸುತ್ತೇನೆ” ಎಂದು ತಮ್ಮ ಆಶಯ ಹಂಚಿಕೊಂಡಿದ್ದಾರೆ.
ಕಾಜಿಯಾ ಅವರ ಗೆಲುವಿನೊಂದಿಗೆ ಈ ಬಾರಿ ಮಿಸ್ ಯೂನಿವರ್ಸ್ ವೇದಿಕೆಯಲ್ಲಿ ಕೇರಳದ ಯುವತಿಯೊಬ್ಬರು ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಂತಾಗಿದೆ.















