ಮಾ.10ರಿಂದ 12ರವರೆಗೆ ಉಡುಪಿಯಲ್ಲಿ 18ನೇ ರಾಷ್ಟ್ರೀಯ ಯೂತ್ ಅಥ್ಲೆಟಿಕ್ ಚಾಂಪಿಯನ್‌ಶಿಪ್: ಶಾಸಕ ರಘುಪತಿ ಭಟ್ 

ಉಡುಪಿ: ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ಹಾಗೂ ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ 18ನೇ ರಾಷ್ಟ್ರೀಯ ಯೂತ್ ಅಥ್ಲೆಟಿಕ್ ಚಾಂಪಿಯನ್‌ಶಿಪ್- 2023 ಅನ್ನು ಇದೇ ಬರುವ ಮಾ.10ರಿಂದ 12ರ ವರೆಗೆ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕ್ರೀಡಾಕೂಟದ ಸಂಘಟನಾ ಸಮಿತಿ ಅಧ್ಯಕ್ಷ, ಶಾಸಕ ರಘುಪತಿ ಭಟ್ ಹೇಳಿದರು.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ರೀಡಾಕೂಟವು 40 ವಿಭಾಗಗಳಲ್ಲಿ ನಡೆಯಲಿದ್ದು, 28 ರಾಜ್ಯ ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 1200 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 125 ಜನ ಕ್ರೀಡಾಧಿಕಾರಿಗಳು, 25 ತಾಂತ್ರಿಕ ಅಧಿಕಾರಿಗಳು, 100 ಜನ ಸ್ವಯಂ ಸೇವಕರು ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಏಪ್ರಿಲ್ 25ರಿಂದ ಉಜ್ಜೇಕಿಸ್ತಾನದಲ್ಲಿ ನಡೆಯುವ 5ನೇಯ ಏಷ್ಯನ್ ಯೂತ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ಗೆ ಭಾರತ ತಂಡದ ಆಯ್ಕೆ ಕೂಡ ಇದೇ ಸಂದರ್ಭದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಕಾರ್ಯದರ್ಶಿ ಎ. ರಾಜವೇಲು, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆಯ ಗೌರವ ಸಲಹೆಗಾರ ಅಶೋಕ್ ಅಡ್ಯಂತಾಯ, ಅಧ್ಯಕ್ಷ ಡಾ. ಕೆಂಪರಾಜ್ ಎಚ್.ಬಿ., ಕಾರ್ಯದರ್ಶಿ ದಿನೇಶ್ ಕುಮಾರ್ ಎ., ನಿಟ್ಟೆ ವಿದ್ಯಾಸಂಸ್ಥೆಯ ನಿರ್ದೇಶಕ ಯೋಗಿಶ್ ಹೆಗ್ಡೆ, ಯುವಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.