ಹಿರಿಯಡಕ : ಅಪ್ಪ, ಅಮ್ಮನ ಜವಾಬ್ದಾರಿ ಮಕ್ಕಳಿಗೆ ಶಿಕ್ಷಣವನ್ನು ಕೊಡುವುದು. ಆ ಶಿಕ್ಷಣವನ್ನು ಸರಿಯಾಗಿ ಕೊಡುವುದರ ಜೊತೆಗೆ ಮಗುವಿಗೆ ತಿಳಿವಳಿಕೆ ಕೊಡುವಂತಹ ವಾತಾವರಣ ಬೇಕು. . 18 ರಿಂದ 30 ವರ್ಷದ ಯುವಕರು ಕುಡಿತದ ಚಟಕ್ಕೆ ಬಿದ್ದಿರುವ ವ್ಯವಸ್ಥೆ ಬಂದಿದೆ ಎಂದರೆ ತಂದೆ ತಾಯಿ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದೇ ಅರ್ಥ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಕುದಿ ಶ್ರೀ ವಿಷ್ಣುಮೂರ್ತಿ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಕುದಿ ವಸಂತ್ ಶೆಟ್ಟಿ ಹೇಳಿದ್ದಾರೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಜಾರಗುತ್ತುವಿನ ಶಾಲಾ ಮತ್ತು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧರ್ಮ ಮಾಡಿದ, ನನ್ನಕ್ಕಿಂತ ದೊಡ್ಡ ಜನರೇ ಇಲ್ಲ ಎಂದುಕೊಂಡ ಆ ನೂರು ಜನ ಮಣ್ಣು ಮುಕ್ಕಿದರು ಎಂಬುದನ್ನು ಮಹಾಭಾರತ ತೋರಿಸಿದೆ. ಇಂದು ನಮ್ಮ ಮನೆಯಲ್ಲೂ ಇಂತಹ ಜನರಿದ್ದಾರೆ. ಅಪ್ಪ, ಅಮ್ಮ ಕಣ್ಣು ತೆರೆದು ನೋಡಿ, ಬುದ್ಧಿ ಹೇಳುವ ಅನಿವಾರ್ಯತೆ ಇದೆ. ದುಶ್ಚಟಗಳಿಗೆ ಬಲಿಯಾದರೆ ಸಮಾಜ ನಂತರ ಹಾಳಾಗುತ್ತದೆ. ಮೊದಲು ನಾವು ಹಾಳಾಗುತ್ತೇವೆ ಎಂದರು.
ಈ ಸಂದರ್ಭ ಮಾತಾಡಿದ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಶಿಕ್ಷಣ ಕ್ಷೇತ್ರದಲ್ಲಿ ಆಧುನಿಕ ಬದಲಾವಣೆಯಾಗುತ್ತಿದೆ. ಬದಲಾವಣೆಯ ಗಾಳಿ ಬೀಸುತ್ತಿದೆ. ಅದನ್ನು ನಾವು ಗಮನಿಸುತ್ತಿರಬೇಕು ಎಂದರು. ಶ್ರೀ ದಶಾವತಾರ ಯಕ್ಷಗಾನ ಕಲಾ ಮಂಡಳಿ, ಕಾಜಾರಗುತ್ತುವಿನ ಭಾಗವತರು ಹಾಗೂ ಕುದಿ ಶ್ರೀ ವಿಷ್ಣುಮೂರ್ತಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಅನಂತಪದ್ಮನಾಭ ಭಟ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನಿವೃತ್ತ ಯೋಧರಾದ ಕಾಜಾರಗುತ್ತುವಿನ ಉಪೇಂದ್ರ ನಾಯಕ್ ಹಾಗೂ ರಮೇಶ್ ಭಂಡಾರಿಯವರನ್ನು ಸನ್ಮಾನಿಸಲಾಯಿತು. ಕೊಡಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜು ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ತಾಲೂಕು ಪಂಚಾಯತ್ ಸದಸ್ಯರಾದ ಸಂಧ್ಯಾ ಕಾಮತ್, ಲಕ್ಷ್ಮೀ ನಾರಾಯಣ ಪ್ರಭು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಮಲ್ಪೆ ರಾಘವೇಂದ್ರ ಹಿರಿಯಡ್ಕ, ಕೊಡಿಬೆಟ್ಟು ಗ್ರಾಮ ಪಂಚಾಯತ್ ಸದಸ್ಯ ಉಮೇಶ್ ಬೋರ್ಕರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿತೀಶ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಅನಿಲ್ ಶೆಟ್ಟಿ, ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ದೇವೇಂದ್ರ ನಾಯಕ್, ಉಪಾಧ್ಯಕ್ಷೆ ಗೀತಾ, ಶಾಲಾ ಮುಖ್ಯೋಪಾಧ್ಯಾಯಿನಿ ಗೌರಿ ಕೆ., ಶಿಕ್ಷಕಿಯರಾದ ಗಾಯತ್ರಿ, ಜಯಲಕ್ಷ್ಮಿ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು. ಚಂದ್ರಿಕಾ ನಾಗರಾಜ್ ಸ್ವಾಗತಿಸಿದರು. ತಿಲಕ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜಯಂತಿ ವಂದಿಸಿದರು.