ಹೂಡೆ: ತೋನ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೂರಿಲ್ಲದ ಕುಟುಂಬಗಳಿಗೆ ಮನೆ ಕಟ್ಟಿ ಕೊಡುವ ಯೋಜನೆಯಡಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್, ಹೂಡೆ ಗುರುವಾರ ಹದಿನೇಳನೇ ಮನೆಯನ್ನು ಬಡ ಕುಟುಂಬವೊಂದಕ್ಕೆ ಹಸ್ತಾಂತರಿಸಿದರು.
ಮನೆಯ ಕೀಲಿಗೈಯನ್ನು ಫಲನುಭವಿಗೆ ಹಸ್ತಾಂತರಿಸಿ ಮಾತನಾಡಿದ ಜಮಾಅತೆ ಇಸ್ಲಾಮಿ ಹಿಂದ್ ಮಲ್ಪೆಯ ಅಧ್ಯಕ್ಷ ರಫೀಕ್, ಇಸ್ಲಾಮಿನ ಆದರ್ಶದಂತೆ ಅನಾಥರಿಗೆ,ದೀನ ದಲಿತರಿಗೆ ಸಹಾಯ ಮಾಡುವುದು ಉಳ್ಳವರ ಕರ್ತವ್ಯವಾಗಿದೆ. ಅದಕ್ಕಾಗಿ ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆ ಇಡೀ ದೇಶದಾದ್ಯಂತ ಸಮಾಜ ಸೇವಾ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
ಕೋವಿಡ್ ಸಂದರ್ಭದಲ್ಲಿ, ನೆರೆಯ ಸಂದರ್ಭದಲ್ಲಿ, ಅನಾಹುತಗಳ ಸಂದರ್ಭದಲ್ಲಿ ಜೆ.ಐ.ಎಚ್ ತನ್ನಿಂದಾದ ಸಹಾಯವನ್ನು ಮಾಡುತ್ತ ಬಂದಿದೆ. ಸಂಘಟನೆಯ ಹೂಡೆ ಘಟಕ ಕೂಡ ಇಂತಹ ಮಾದರಿ ಕೆಲಸವನ್ನು ನಿರಂತರ ಮಾಡಿಕೊಂಡು ಬಂದಿದೆ. ಅದಕ್ಕೆ ಸಾಕ್ಷಿಯೆಂಬಂತೆ ಹದಿನೇಳನೆ ಮನೆಯನ್ನು ಅವರು ಇಂದು ಹಸ್ತಾಂತರಿಸುತ್ತಿದ್ದಾರೆ. ನಿಜವಾಗಿಯೂ ಈ ಕಾರ್ಯ ಶ್ಲಾಘನೀಯ ಎಂದರು.
ತೋನ್ಸೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನಿತ್ಯಾನಂದ ಕೆಮ್ಮಣ್ಣು ಮಾತನಾಡಿ, ಜಾತಿ, ಮತ, ಧರ್ಮದ ಬೇಧವಿಲ್ಲದೆ ಇವತ್ತು ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆ ಸಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಗ್ರಾಮದ ಅತೀ ಬಡ ಕುಟುಂಬ ಗುರುತಿಸಿ ಮನೆಯೊದಗಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಅವರ ಸಮಾಜಮುಖಿ ಕಾರ್ಯಗಳು ಮತ್ತಷ್ಟು ಮುಂದುವರಿಯಲಿ ಎಂದರು.
ಈ ಸಂದರ್ಭದಲ್ಲಿ ತೋನ್ಸೆ ಪಂಚಾಯತ್ ಕಾರ್ಯದರ್ಶಿಗಳಾದ ದಿನಕರ್,ತಾಲೂಕು ಪಂಚಾಯತ್ ಸದಸ್ಯೆ ಸುಲೋಚನ ಸತೀಶ್ ಯಶೋಧ, ಉಸ್ತಾದ್ ಸಾದೀಕ್ ಮಾತನಾಡಿ ಶುಭ ಹಾರೈಸಿದರು. ಜಮಾಅತೆ ಇಸ್ಲಾಮಿ ಹಿಂದ್, ಹೂಡೆಯ ಅಧ್ಯಕ್ಷರಾದ ಅಬ್ದುಲ್ ಕಾದೀರ್ ಮೊಯ್ದಿನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ತೋನ್ಸೆ ಗ್ರಾಮ ಪಂಚಾಯತ್ ಸದಸ್ಯರಾದ ಇದ್ರಿಸ್ ಹೂಡೆ, ಜಮೀಲಾ, ವಿಜಯ್, ಮಮ್ತಾಝ್, ಜೆ.ಐ.ಎಚ್ ಹೂಡೆ ಕಾರ್ಯದರ್ಶಿ ಹಸನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು. ಆದಿಲ್ ಹೂಡೆ ಪ್ರಸ್ತಾವಿಕ ನುಡಿಗಳನ್ನಾಡಿದರು. ಮುಫೀದ್ ಹೂಡೆ ಕಾರ್ಯಕ್ರಮ ನಿರೂಪಿಸಿದರು.