ಸೆ.3ರಂದು ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರ ಪಟ್ಟಾಭಿಷೇಕದ 17ನೇ ವರ್ಧಂತ್ಯುತ್ಸವ

ಉಡುಪಿ: ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರ ಪಟ್ಟಾಭಿಷೇಕದ 17ನೇ ವರ್ಧಂತ್ಯುತ್ಸವ ವೈದಿಕ ವಿಧಿ ವಿಧಾನಗಳೊಂದಿಗೆ ಸೆ.3ರಂದು ಬೆಳಿಗ್ಗೆ 11ಗಂಟೆಗೆ ಧರ್ಮಸ್ಥಳದ ಶ್ರೀರಾಮಕ್ಷೇತ್ರ ಮಹಾಸಂಸ್ಥಾನದಲ್ಲಿ ನಡೆಯಲಿದೆ ಎಂದು ಶ್ರೀರಾಮಕ್ಷೇತ್ರ ಮಹಾಸಂಸ್ಥಾನ ಟ್ರಸ್ಟ್ ನ ಗೌರವಾಧ್ಯಕ್ಷರು, ಮಾಜಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದರು.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಾಭಿಷೇಕದ 17ನೇ ವರ್ಧಂತ್ಯುತ್ಸವ ಸಮಾರಂಭದಲ್ಲಿ ರಾಜ್ಯದ ವಿವಿಧ ಸಚಿವರು, ಶಾಸಕರು, ಸಂಸದರು, ಮಾಜಿ ಶಾಸಕರು, ಮಾಜಿ ಸಂಸದರು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ದಕ್ಷಿಣದ ಅಯೋಧ್ಯೆ ಎಂದೇ ಖ್ಯಾತಿ ಪಡೆದ ಶ್ರೀ ರಾಮಕ್ಷೇತ್ರದ ನಿರ್ಮಾತ್ಮ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ಸಂಕಲ್ಪದಂತೆ ಸದ್ಗುರು ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರು ವಿವಿಧ ಶಾಖಾ ಮಠಗಳನ್ನು ಸ್ಥಾಪಿಸಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶಾಖಾ ಮಠ ನಿರ್ಮಾಣದ ಕಾಮಗಾರಿ ಆರಂಭಗೊಂಡಿದೆ. ತಮ್ಮ ಪಟ್ಟಾಭಿಷೇಕದ ದಶಮಾನೋತ್ಸವ ಸಂದರ್ಭದಲ್ಲಿ ಯಶಸ್ವಿಯಾಗಿ ರಾಷ್ಟ್ರೀಯ ಧರ್ಮ ಸಂಸದ್ ಆಯೋಜಿಸಿ ಜನಮಾನಸದಲ್ಲಿ ಉಳಿಯುವಂತೆ ಮಾಡಿದ್ದರು ಎಂದು ಹೇಳಿದರು.

ಕಳೆದ 6 ವರ್ಷಗಳಿಂದ ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿದ್ದು, ಈ ವರ್ಷ ಉತ್ತರ ಕನ್ನಡ ಜಿಲ್ಲೆಯ ಕುಮುಟಾ ತಾಲೂಕು ಕೋನಳ್ಳಿ ವನದುರ್ಗಾ ದೇವಸ್ಥಾನದಲ್ಲಿ ಜು.10ರಿಂದ ಅ.20ರವರೆಗೆ ಚಾತುರ್ಮಾಸ್ಯ ವ್ರತಾಚಾರಣೆ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿದಿನ ಭಜನೆ ಯಕ್ಷಗಾನ, ತಾಳಮದ್ದಳೆ,ಭರತನಾಟ್ಯ ವೈಭವ, ಗೀತಾ ರೂಪಕ ಸೇರಿದಂತೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ದೇಶ ವಿದೇಶಗಳಿಂದ ಸುಮಾರು ಎರಡು ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿ ಗುರುಗಳಿಂದ ಮಂತ್ರಾಕ್ಷತೆ ಸ್ವೀಕರಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ ಎಂದು‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ನ ಅಧ್ಯಕ್ಷ ಓಬು ಪೂಜಾರಿ, ಉಪಾಧ್ಯಕ್ಷ ರಘುನಾಥ್ ಮಾಬಿಯನ್, ಟ್ರಸ್ಟಿಗಳಾದ ನಾರಾಯಣ ಬಿ.ಎಸ್. ಇದ್ದರು.