ಶಾಲೆಗಳಲ್ಲಿ ಹುಸಿ ಬಾಂಬ್ ಬೆದರಿಕೆ: ತಮಿಳುನಾಡು ಮೂಲದ 17 ವರ್ಷದ ಬಾಲಕ ಇ-ಮೇಲ್ ಗಳ ಮಾಸ್ಟರ್ ಮೈಂಡ್?

ಬೆಂಗಳೂರು: ಇದೇ ವರ್ಷ ಏಪ್ರಿಲ್ ನಲ್ಲಿ ಬೆಂಗಳೂರಿನ 10ಕ್ಕೂ ಹೆಚ್ಚು ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದ, ಹುಸಿ ಬಾಂಬ್ ಕರೆ‌ ಪ್ರಕರಣದಲ್ಲಿ ಹೊಸ ಮಾಹಿತಿ ಲಭ್ಯವಾಗಿದೆ. 17 ವರ್ಷದ ಬಾಲಕ ಸಿದ್ದಪಡಿಸಿದ್ದ ಸಾಫ್ಟ್ ವೇರ್ ಪ್ರೋಗ್ರಾಂ ಬಳಸಿ ಹುಸಿ ಬಾಂಬ್ ಇ-ಮೇಲ್ ಕಳುಹಿಸಿರುವುದಾಗಿ ತಿಳಿದುಬಂದಿದೆ.

ತಮಿಳುನಾಡು ಮೂಲದ 17 ವರ್ಷದ ಬಾಲಕನೊಬ್ಬ ಇ-ಮೇಲ್ ಗಳ ಮಾಸ್ಟರ್ ಮೈಂಡ್ ಆಗಿದ್ದಾನೆ ಎನ್ನಲಾಗಿದೆ. ಹುಸಿ ಬಾಂಬ್ ಕರೆಯ ಕೆಲ‌ದಿನಗಳ ಹಿಂದೆ ಭೋಪಾಲ್ ನ ಕೆಲ ಶಾಲೆಗಳಿಗೂ ದುಷ್ಕರ್ಮಿಗಳು ಇಮೇಲ್ ಮಾಡಿ ಬಾಂಬ್ ಇಟ್ಟಿರುವುದಾಗಿ ಸಂದೇಶ ಕಳುಹಿಸಿದ್ದ‌ರು. ಈ ಸಂಬಂಧ‌ ಅಲ್ಲಿನ ಪೊಲೀಸರು‌ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಈ ನಡುವೆ ಬೆಂಗಳೂರಿನ ಕೆಲ ಶಾಲೆಗಳಿಗೂ ಬೆದರಿಕೆ ಕರೆಗಳು ಬಂದಿದ್ದವು‌‌.‌ ಈ‌ ಸಂಬಂಧ‌ ಮಾಹಿತಿ ಹಂಚಿಕೊಂಡ ಎರಡು ರಾಜ್ಯಗಳ‌ ಪೊಲೀಸರು ಬೆದರಿಕೆ ಬಂದಿದ್ದ ಇ-ಮೇಲ್ ಗಳ ಐಪಿ ಅಡ್ರೆಸ್ ಗಳನ್ನು ಪತ್ತೆಹಚ್ಚಿದ್ದಾರೆ.

ಮೂಲತಃ ತಮಿಳುನಾಡಿನವನಾಗಿರುವ 17 ವರ್ಷದ ಬಾಲಕ ಸಾಫ್ಟ್ ವೇರ್ ಕಂಪನಿ ಮಾಡುವ ಆಶಯ ಹೊಂದಿದ್ದು, ಮಲ್ಟಿಪಲ್ ಮೇಲ್ ಕಳಿಸುವ ಬೋಟ್ ಸಾಫ್ಟ್ ವೇರ್ ಪ್ರೋಗಾಂ ಸಿದ್ದಪಡಿಸಿದ್ದ. ಬಳಿಕ ವಿದೇಶಿಯರಿಗೆ ಕಂಪ್ಯೂಟರ್ ಪ್ರೋಗ್ರಾಮ್ ಮಾರಾಟ ಮಾಡುತ್ತಿದ್ದ. ದುಷ್ಕರ್ಮಿಗಳು ಇದೇ ಸಾಫ್ಟ್ ವೇರ್ ನಿಂದ ಬೆಂಗಳೂರು ಹಾಗೂ ಭೋಪಾಲ್ ಶಾಲೆಗಳಿಗೆ ಬೆದರಿಕೆ ಇ-ಮೇಲ್ ಕಳುಹಿಸಿದ್ದರು. 17 ವರ್ಷದ ಬಾಲಕನ‌‌ ಮುಖಾಂತರ ಆರೋಪಿಗಳ ಪತ್ತೆಗೆ ನಗರ ಪೊಲೀಸರು ಮುಂದಾಗಿದ್ದಾರೆಂದು ವರದಿಯಾಗಿದೆ.