ನವದೆಹಲಿ: ಕೆಲವೇ ಗಂಟೆಗಳಲ್ಲಿ ನಗರಗಳೇ ಕೊಚ್ಚಿಹೋಗುವಷ್ಟು ನೇಪಾಳದಲ್ಲಿ ಭೀಕರ ಹಠಾತ್ ಪ್ರವಾಹ ಸಂಭವಿಸಿದೆ. ರಸುವಾ ಪ್ರದೇಶದಲ್ಲಿ ಸಂಭವಿಸಿದ ಈ ದುರಂತದಲ್ಲಿ 160 ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ತಿಳಿಸಿದ್ದಾರೆ.
ಕಠ್ಮಂಡುವಿನಲ್ಲಿ ನಡೆದ ಎನ್‌ಡಿಟಿವಿ ವರ್ಲ್ಡ್ ಅನ್ವೀಕ್ಷಾ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಪ್ರವಾಹದಲ್ಲಿ ನಾಪತ್ತೆಯಾಗಿರುವವರಲ್ಲಿ ಹೆಚ್ಚಿನವರು ಮಾನಸ ಸರೋವರ ಯಾತ್ರಿಕರಾಗಿದ್ದಾರೆ ಎಂದು ಮಾಹಿತಿ ನೀಡಿದರು.
300 ಭಾರತೀಯರು ಸಂಪರ್ಕಕ್ಕೆ ಸಿಗುತ್ತಿಲ್ಲ
ಪ್ರವಾಹ ಪೀಡಿತ ಮಾರ್ಗವನ್ನು ಭಾರತೀಯರು ಸೇರಿದಂತೆ ಹಲವು ದೇಶಗಳ ಪ್ರವಾಸಿಗರು ಮಾನಸ ಸರೋವರ ಯಾತ್ರೆಗೆ ಬಳಸುತ್ತಾರೆ. ಸುಮಾರು 300 ಭಾರತೀಯರು ನಾಪತ್ತೆಯಾಗಿದ್ದು, ಅವರೊಂದಿಗೆ ಸಂಪರ್ಕ ಸಾಧಿಸಲು ನೇಪಾಳ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಸಚಿವರು ತಿಳಿಸಿದರು.
ಒಟ್ಟಾರೆಯಾಗಿ ಸುಮಾರು 500 ವಿದೇಶಿ ಪ್ರಜೆಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ನೇಪಾಳಿ ನಾಗರಿಕರ ಸುರಕ್ಷತೆಯಷ್ಟೇ ವಿದೇಶಿ ಪ್ರಜೆಗಳ ಸುರಕ್ಷತೆಗೂ ಸರ್ಕಾರ ಆದ್ಯತೆ ನೀಡಿದ್ದು, ಸಂಬಂಧಪಟ್ಟ ದೇಶಗಳ ರಾಯಭಾರ ಕಚೇರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಖನಾಲ್ ಹೇಳಿದರು.

ಭಾರತಕ್ಕೆ ಧನ್ಯವಾದ
ಇತ್ತೀಚಿನ ವರ್ಷಗಳಲ್ಲಿ ನೇಪಾಳವನ್ನು ತಲ್ಲಣಗೊಳಿಸಿದ ಅತ್ಯಂತ ಭೀಕರ ದುರಂತಗಳಲ್ಲಿ ಇದೂ ಒಂದಾಗಿದೆ ಎಂದು ಸಚಿವರು ಬಣ್ಣಿಸಿದರು. ಸದ್ಯ ಸರ್ಕಾರದ ಸಂಪೂರ್ಣ ಗಮನ ರಕ್ಷಣಾ ಕಾರ್ಯಾಚರಣೆ ಮತ್ತು ತಕ್ಷಣದ ಪರಿಹಾರ ಕ್ರಮಗಳ ಮೇಲಿದೆ ಎಂದು ತಿಳಿಸಿದರು.
ದುರಂತದ ಸಂದರ್ಭದಲ್ಲಿ ತಕ್ಷಣವೇ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಟ್ಟ ಭಾರತ ಸರ್ಕಾರಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. ಜಾಗತಿಕ ಮಟ್ಟದಲ್ಲಿಯೂ ಹಲವು ದೇಶಗಳು ನೇಪಾಳಕ್ಕೆ ಬೆಂಬಲ ನೀಡುತ್ತಿವೆ ಎಂದು ಹೇಳಿದರು.

ಪ್ರವಾಸಿಗರಿಗೆ ನೇಪಾಳಕ್ಕೆ ಬರುವಂತೆ ಮನವಿ
ಸಂಕಷ್ಟದ ಸಂದರ್ಭದಲ್ಲಿ ಇಡೀ ವಿಶ್ವ ನೇಪಾಳದ ಬೆಂಬಲಕ್ಕೆ ನಿಲ್ಲಬೇಕು. ದೇಶದ ಪುನರ್‌ನಿರ್ಮಾಣಕ್ಕೆ ನೆರವಾಗಲು ಪ್ರವಾಸಿಗರು ನೇಪಾಳ ಭೇಟಿಯನ್ನು ಮುಂದುವರಿಸಬೇಕು ಎಂದು ಖನಾಲ್ ಮನವಿ ಮಾಡಿದರು.
ನೇಪಾಳದ ಹೆಚ್ಚಿನ ಭಾಗಗಳು ಪ್ರವಾಹದಿಂದ ಬಾಧಿತವಾಗಿಲ್ಲ. ಪೋಖರಾ ಮತ್ತು ಮೌಂಟ್ ಎವರೆಸ್ಟ್ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳು ಸುರಕ್ಷಿತವಾಗಿದ್ದು, ಪ್ರವಾಸಿಗರಿಗೆ ಮುಕ್ತವಾಗಿವೆ ಎಂದು ಅವರು ತಿಳಿಸಿದರು.
ಪ್ರವಾಸೋದ್ಯಮವು ದೇಶದ ಪುನರ್‌ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. 2015ರ ಭೂಕಂಪದ ಬಳಿಕವೂ ನೇಪಾಳ ಬಲಿಷ್ಠವಾಗಿ ಚೇತರಿಸಿಕೊಂಡಿತ್ತು. ಈ ಬಾರಿಯೂ ದೇಶ ಮತ್ತೆ ಎದ್ದು ನಿಲ್ಲಲಿದೆ ಎಂಬ ವಿಶ್ವಾಸವಿದೆ ಎಂದು ಸಚಿವರು ಹೇಳಿದರು.















