16 ಕೋಟಿ ನಿವ್ವಳ ಲಾಭ ಪ್ರಥಮ ಬಾರಿಗೆ ಗಳಿಸಿದ ಓಯೋ

ನವದೆಹಲಿ: ಜಾಗತಿಕ ಟ್ರಾವೆಲ್ ಟೆಕ್ ಬ್ರಾಂಡ್ ಓಯೋ ಇದೇ ಮೊದಲ ಬಾರಿಗೆ ಲಾಭ ಗಳಿಸಿರುವುದಾಗಿ ವರದಿ ಮಾಡಿದೆ. ಹೊಟೇಲ್​​ ಕೋಣೆಗಳ ಬುಕಿಂಗ್​ ಆಯಪ್​ ಕಂಪನಿ ಇದೇ ಮೊದಲ ಬಾರಿಗೆ ಲಾಭ ದಾಖಲಿಸಿದೆ.2024ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಮೊದಲ ಬಾರಿಗೆ ತೆರಿಗೆ ನಂತರ 16 ಕೋಟಿ ರೂಲಾಭ ಮಾಡಿರುವುದಾಗಿ ಓಯೋ ಹೇಳಿದೆ. ಕಂಪನಿಯ ಉನ್ನತ ಆಡಳಿತ ಮಂಡಳಿಗೆ ಬರೆದ ಪತ್ರದಲ್ಲಿ, ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರು 2024 ರ ಎರಡನೇ ತ್ರೈಮಾಸಿಕವು ಕಂಪನಿಯ ಮೊದಲ ಲಾಭದಾಯಕ ತ್ರೈಮಾಸಿಕವಾಗಿದ್ದು, ತೆರಿಗೆ ನಂತರದ ಲಾಭವು (ಪಿಎಟಿ) 16 ಕೋಟಿ ರೂ.ಗಿಂತ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಓಯೋ 2023ರ ಹಣಕಾಸು ವರ್ಷದ ವಾರ್ಷಿಕ ಲೆಕ್ಕಪತ್ರಗಳನ್ನು ಸಹ ಪ್ರಕಟಿಸಿದೆ. ಇದರ ಪ್ರಕಾರ 2023 ರ ಹಣಕಾಸು ವರ್ಷದಲ್ಲಿ ಕಾರ್ಯಾಚರಣೆಯು ಲಾಭದಾಯಕತೆಯನ್ನು ಸಾಧಿಸಿದೆ ಹಾಗೂ 277 ಕೋಟಿ ರೂ.ಗಳ ಸರಿಹೊಂದಿಸಿದ ಇಬಿಐಟಿಡಿಎ ಸಾಧಿಸಿದೆ. ಜಾಗತಿಕವಾಗಿ ಓಯೋ ಹೋಟೆಲ್​ಗಳಲ್ಲಿ ಗುಣಮಟ್ಟದ ಗ್ರಾಹಕ ಸೇವೆಯ ಮೇಲೆ ಹೆಚ್ಚಿನ ಗಮನವನ್ನು ಉಲ್ಲೇಖಿಸಿದ ಕಂಪನಿಯು 2022 ರ ಹಣಕಾಸು ವರ್ಷದಲ್ಲಿ 18,037 ರಿಂದ 2023 ರಲ್ಲಿ ಹೋಟೆಲ್​ಗಳ ಸಂಖ್ಯೆಯನ್ನು 12,938 ಕ್ಕೆ ಇಳಿಸಿದೆ.

ಓಯೋ 10 ವರ್ಷಗಳನ್ನು ಪೂರೈಸಿದ್ದಕ್ಕಾಗಿ ತಮ್ಮ ತಂಡವನ್ನು ಅಭಿನಂದಿಸಿದ ಅಗರ್ವಾಲ್, “ಈ ತ್ರೈಮಾಸಿಕದ ಪ್ರಸ್ತುತ ಬೆಳವಣಿಗೆಯ ಪ್ರಕಾರ, 2024 ರ ಎರಡನೇ ತ್ರೈಮಾಸಿಕದಲ್ಲಿ ನಮ್ಮ ಕಂಪನಿಯು ಇದೇ ಮೊದಲ ಬಾರಿಗೆ ತೆರಿಗೆ ನಂತರದ 16 ಕೋಟಿ ರೂ. ಯೋಜಿತ ಲಾಭ ಗಳಿಸಿದೆ” ಎಂದು ಬರೆದಿದ್ದಾರೆ. ಕಾರ್ಯಾಚರಣೆಗಳಿಂದ ಬರುವ ಆದಾಯವು 2022 ರ ಹಣಕಾಸು ವರ್ಷದಲ್ಲಿ 4,781 ಕೋಟಿ ರೂ.ಗಳಿಂದ 2023 ರ ಹಣಕಾಸು ವರ್ಷದಲ್ಲಿ 5,463 ಕೋಟಿ ರೂ.ಗೆ ಏರಿದೆ. ಇದು ಶೇಕಡಾ 14 ರಷ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದ್ದಾರೆ.

“ನಾವು ನಮ್ಮ ನಷ್ಟವನ್ನು 1,286 ಕೋಟಿ ರೂ.ಗೆ ಇಳಿಸಿದ್ದೇವೆ. ನಮ್ಮ ಸರಿಹೊಂದಿಸಿದ ಒಟ್ಟು ಲಾಭಾಂಶವು ಆದಾಯದ ಶೇಕಡಾ 43 ಕ್ಕೆ ಏರಿದೆ ಮತ್ತು ಸರಿಹೊಂದಿಸಿದ ಒಟ್ಟು ಲಾಭವು 2022 ರ ಹಣಕಾಸು ವರ್ಷದಲ್ಲಿ 1,915 ಕೋಟಿ ರೂ. ಗಳಿಂದ 2023 ರ ಹಣಕಾಸು ವರ್ಷದಲ್ಲಿ 2,347 ಕೋಟಿ ರೂ.ಗೆ ಏರಿದೆ” ಎಂದು ಅಗರ್ವಾಲ್ ಬರೆದಿದ್ದಾರೆ.

ಒಟ್ಟಾರೆ ಬುಕಿಂಗ್ ಮೌಲ್ಯ (ಜಿಬಿವಿ) ಶೇಕಡಾ 25 ರಷ್ಟು ಏರಿಕೆಯಾಗಿದ್ದು, 2023 ರ ಹಣಕಾಸು ವರ್ಷದಲ್ಲಿ 10,000 ಕೋಟಿ ರೂ. ಗಳ ಮೈಲಿಗಲ್ಲನ್ನು ತಲುಪಿದೆ. 2024ರ ಹಣಕಾಸು ವರ್ಷದಲ್ಲಿ ಓಯೋ ಸುಮಾರು 800 ಕೋಟಿ ರೂ. ಗಳ ಸರಿಹೊಂದಿಸಿದ ಇಬಿಐಟಿಡಿಎಯನ್ನು ಸಾಧಿಸುವ ನಿರೀಕ್ಷೆಯಿದೆ ಎಂದು ಅಗರ್ವಾಲ್ ಈ ವರ್ಷದ ಆರಂಭದಲ್ಲಿ ಉದ್ಯೋಗಿಗಳೊಂದಿಗೆ ನಡೆಸಿದ ಟೌನ್ ಹಾಲ್​ ಮೀಟಿಂಗ್​ನಲ್ಲಿ ಹೇಳಿದ್ದರು.