ಸಿಕ್ಕಿಂನಲ್ಲಿ ಸೇನಾ ವಾಹನ ಪಲ್ಟಿ: 16 ಯೋಧರ ಸಾವು; ನಾಲ್ವರಿಗೆ ಗಾಯ

ನವದೆಹಲಿ: ಸಿಕ್ಕಿಂನಲ್ಲೊಂದು ಹೃದಯ ಕಲಕುವ ಘಟನೆ ನಡೆದಿದೆ. ಶುಕ್ರವಾರ ಉತ್ತರ ಸಿಕ್ಕಿಂ ಬಳಿ ಕಡಿದಾದ ಇಳಿಜಾರಿನಲ್ಲಿ ಸೇನಾ ವಾಹನವು ಜಾರಿ ಕೆಳಗುರುಳಿ 16 ಸೇನಾ ಯೋಧರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ.

ಬೆಳಿಗ್ಗೆ ಚಾಟೆನ್‌ನಿಂದ ಥಾಂಗು ಕಡೆಗೆ ಸಾಗುತ್ತಿದ್ದ ಈ ವಾಹನವು ಮೂರು ವಾಹನಗಳ ಬೆಂಗಾವಲು ಪಡೆಯ ಭಾಗವಾಗಿತ್ತು ಮತ್ತು ಝೀಮಾ ಮಾರ್ಗದಲ್ಲಿ ವಾಹನವು ಅಪಘಾತಕ್ಕೀಡಾಯಿತು.

ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಪ್ರಾರಂಭಿಸಲಾಯಿತು ಮತ್ತು ಗಾಯಗೊಂಡ ನಾಲ್ವರು ಸೈನಿಕರನ್ನು ಏರ್ ಲಿಫ್ಟ್ ಮೂಲಕ ಸ್ಥಳಾಂತರಿಸಲಾಗಿದೆ. ದುರದೃಷ್ಟವಶಾತ್, ಮೂವರು ಜೂನಿಯರ್ ಕಮಿಷನ್ಡ್ ಅಧಿಕಾರಿಗಳು ಮತ್ತು 13 ಸೈನಿಕರು ಅಪಘಾತದಲ್ಲಿ ಉಂಟಾದ ಗಾಯಗಳಿಗೆ ಬಲಿಯಾಗಿದ್ದಾರೆ ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಎಲ್ಲಾರೂ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸಿದ್ದಾರೆ.