ಮಂಗಳೂರು: 2009 ರಲ್ಲಿ ಸಂತ ಮದರ್ ತೆರೇಸಾರವರ ಜನ್ಮದಿನದಂದು ನಿರಾಶ್ರಿತ ಮಾನಸಿಕ ಅಸ್ವಸ್ಥರ ಸೇವೆಗಾಗಿ ಪ್ರಾರಂಭಗೊಂಡ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ತನ್ನ 14 ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಸಮಾಜಕ್ಕೆ ಸಂಸ್ಥೆಯ ಅತ್ಯುತ್ತಮ ಕೊಡುಗೆಗಳನ್ನು ಪ್ರದರ್ಶಿಸುವ ಕಾರ್ಯಕ್ರಮಗಳ ಜೊತೆಗೆ ಅನುಕಂಪ, ದಯೆ ಮತ್ತು ಸಹಾನುಭೂತಿಯ ತತ್ವಗಳ ಮೇಲೆಸ್ಥಾಪಿತವಾದ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಬಡವರು ಮತ್ತು ನಿರ್ಗತಿಕರಿಗೆ ಭರವಸೆಯ ದಾರಿದೀಪವಾಗಿ ಹೊರಹೊಮ್ಮಿದೆ. ಕಳೆದ 14 ವರ್ಷಗಳಲ್ಲಿ ಅಸಂಖ್ಯಾತ ನೊಂದವರ ಜೀವನವನ್ನು ಬೆಳಗಿಸಿದೆ.
ಈ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಸಂತ ದೇವಸಹಾಯ ಪಿಳ್ಳೈ ಅವರ ಗ್ರೊಟ್ಟೊವನ್ನು ವರ್ಕಾಡಿ
ದೇವಾಲಯದ ಪ್ರಧಾನ ಗುರುಗಳಾದ ವಂದನೀಯ ಫಾ. ಬಾಸಿಲ್ ವಾಸ್ ಇವರು ಆಶೀರ್ವದಿಸಿ
ಉದ್ಘಾಟಿಸಿದರು.
ಸಮುದಾಯದ ಪ್ರಮುಖ ಮುಖಂಡರು, ಧರ್ಮಗುರುಗಳು,ಸಾರ್ವಜನಿಕರು, ದಾನಿಗಳು ಹಾಗೂ ಸ್ನೇಹಾಲಯದ ಸಂಸ್ಥಾಪಕರು ಮತ್ತು ಟ್ರಸ್ಟಿಗಳು ಉಪಸ್ಥಿತರಿದ್ದರು.
ಬಳಿಕ ಬಲಿಪೂಜೆ ನೆರವೇರಿತು. ಬಲಿಪೂಜೆಯ ಮುಖ್ಯ ಅರ್ಚಕರಾಗಿ ವಂದನೀಯ ಗುರುಗಳಾದ ಫಾ ಆರ್ಚಿಬಾಲ್ಡ್ ಗೊನ್ಸಾಲ್ವಿಸ್ ಒಸಿಡಿ ಹಾಗೂ ಫಾ ಬಾಸಿಲ್ ವಾಸ್, ಫಾ ಎಡ್ವಿನ್ ಪಿಂಟೊ ಮತ್ತು ಫಾ ಸಿರಿಲ್ ಡಿಸೋಜಾ ಭಾಗವಹಿಸಿದರು.
ಪವಿತ್ರ ಬಲಿ ಪೂಜೆಯ ನಂತರ ಸ್ನೇಹಾಲಯದ ಸಂಸ್ಥಾಪಕ ಬ್ರ ಜೋಸೆಫ್ ಕ್ರಾಸ್ತಾ ಅವರು ಕೃತಜ್ಞತೆ
ವ್ಯಕ್ತಪಡಿಸಿದರು. ಈ ಸಂಸ್ಥೆಯ 14 ವರ್ಷಗಳ ಪಯಣವನ್ನು ಸುಗಮ ರೀತಿಯಲ್ಲಿ ಸಂಚಾಲನೆ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಪ್ರಸಕ್ತ ವರ್ಷದ ಅತ್ಯುತ್ತಮ ಸಿಬ್ಬಂದಿ ಎಂದು ಗುರುತಿಸಲ್ಪಟ್ಟಿರುವ ಮಾರ್ಕೊ ಸ್ಟಾನ್ಲಿ ಫೆರ್ನಾಂಡಿಸ್ ಅವರಿಗೆ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು. ಸಹಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.