ರಾಜ್ಯದಲ್ಲಿ ಇಂದಿನಿಂದ (ಏ.27) 14 ದಿನ ಕೋವಿಡ್ ಕರ್ಪ್ಯೂ: ಬಿಡುಗಡೆಯಾದ ಹೊಸ ಮಾರ್ಗಸೂಚಿಯ ವಿವರ ಹೀಗಿದೆ.?

ಬೆಂಗಳೂರು: ತೀವ್ರಗತಿಯಲ್ಲಿ‌ ಹರಡುತ್ತಿರುವ ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಇಂದಿನಿಂದ (ಏ.27) ರಾತ್ರಿ 9ರಿಂದ 14 ದಿನ ಕೋವಿಡ್ ಕರ್ಪ್ಯೂ ಜಾರಿಗೊಳಿಸಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಹೊಸ ಮಾರ್ಗಸೂಚಿಯ ಬಿಡುಗಡೆ ಮಾಡಿದ್ದಾರೆ. ಅದರಂತೆ ಏಪ್ರಿಲ್ 27ರ ರಾತ್ರಿ 9 ಗಂಟೆಯಿಂದ ಮೇ 12ರ ಬೆಳಿಗ್ಗೆ 6 ಗಂಟೆಯವರೆಗೆ ಹೊಸ ಮಾರ್ಗಸೂಚಿಯ ಅನ್ವಯ ರಾಜ್ಯದಲ್ಲಿ ಲಭ್ಯವಿರುವ ಸೇವೆಗಳು ಮತ್ತು ನಿಷೇಧಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಗತ್ಯ ವಸ್ತುಗಳ ಮಾರಾಟ:
ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯಸೇವೆಯ ಅಂಗಡಿಗಳು ತೆರೆಯಬಹುದು.
ದಿನಸಿ, ಹಣ್ಣು ತರಕಾರಿ, ಮೀನು ಮಾಂಸ ಅಂಗಡಿ ತೆರೆಯಲು ಅವಕಾಶವಿದೆ.
ಮದ್ಯಂದಗಡಿಗಳು ಬೆಳಗ್ಗೆ 6ರಿಂದ 10ಗಂಟೆವರೆಗೆ ಮಾತ್ರ ತೆರೆದಿರಲಿವೆ.
ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್, ದರ್ಶಿನಿಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ. ಕೃಷಿ ಸಂಬಂಧಿಸಿದ ಚಟುವಟಿಕೆಗೆ ಯಾವುದೇ ನಿರ್ಬಂಧವಿಲ್ಲ.
ಬ್ಯಾಂಕ್, ಇ-ಕಾಮರ್ಸ್ ಸೇವೆಗಳಿಗೆ ನಿರ್ಬಂಧ ಇರುವುದಿಲ್ಲ.

ಸಾರಿಗೆ ಸಂಚಾರ:
ಏರ್‌ಪೋರ್ಟ್‌ ಬಸ್, ಟ್ಯಾಕ್ಸಿಗಳಿಗೆ ಷರತ್ತುಬದ್ಧ ಅವಕಾಶ ನೀಡಲಾಗಿದೆ. ಪ್ರಯಾಣಿಸುವವರು ಟ್ರಾವೆಲ್ ದಾಖಲಾತಿ, ಟಿಕೆಟ್ ತೋರಿಸುವುದು ಕಡ್ಡಾಯವಾಗಿದೆ.
ತುರ್ತು ಸೇವೆಗೆ ಮಾತ್ರ ಆಟೋ, ಟ್ಯಾಕ್ಸಿಗೆ ಅವಕಾಶ – ಮೇ 12ರವರೆಗೆ ಮೆಟ್ರೋ ಸಂಚಾರ ಸಂಪೂರ್ಣ ಬಂದ್ – ಅಂತಾರಾಜ್ಯವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ.
ಅಂತರ್ ಜಿಲ್ಲಾ ಅಂತರ್ ರಾಜ್ಯ ತುರ್ತು ಸೇವೆಗೆ ಮಾತ್ರ ಅವಕಾಶ.

ಮದುವೆಗೆ 50 ಮಂದಿ
ಮದುವೆ ಕಾರ್ಯಕ್ರಮದಲ್ಲಿ 50 ಜನರು ಮಾತ್ರ ಪಾಲ್ಗೊಳ್ಳಬಹುದು.
ಅಂತ್ಯಕ್ರಿಯೆಯಲ್ಲಿ ಕೇವಲ ಐವರು ಮಾತ್ರ ಭಾಗಿ ಆಗಬೇಕು. ಈ ವಿಚಾರವನ್ನು ಕಟ್ಟುನಿಟ್ಟಾಗಿ ಗಮನಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಯಾವುದೆಲ್ಲ ಬಂದ್…
ರಾಜ್ಯದಲ್ಲಿ ಎಲ್ಲ ಶಾಲಾ ಕಾಲೇಜುಗಳನ್ನು ಮುಚ್ಚಲು ಆದೇಶ ನೀಡಲಾಗಿದೆ.
ಸಿನಿಮಾ ಹಾಲ್,ಶಾಪಿಂಗ್ ಮಾಲ್, ಜಿಮ್, ಯೋಗ ಕೇಂದ್ರ, ಸಮುದಾಯ ಭವನಗಳನ್ನು ಬಂದ್ ಮಾಡಲು ಆದೇಶ ನೀಡಲಾಗಿದೆ.
ಸ್ಟೇಡಿಯಂ, ಆಟದ ಮೈದಾನ, ಕ್ರೀಡಾ ಸಂಕೀರ್ಣ, ಜಿಮ್‌ಗಳನ್ನು ತೆರೆಯುವಂತಿಲ್ಲ.

ಸಾಮಾಜಿಕ, ಧಾರ್ಮಿಕ, ಕ್ರೀಡಾ ಮನರಂಜನಾ, ಸಾಂಸ್ಕೃತಿಕ, ರಾಜಕೀಯ ಚಟುವಟಿಕೆಗೆ ಸಂಪೂರ್ಣ ನಿರ್ಬಂಧ
ಮಂದಿರ, ಮಸೀದಿ, ಚರ್ಚ್‌ಗಳಿಗೆ ಜನರು ಪ್ರವೇಶಿಸುವಂತಿಲ್ಲ. ದೇವಾಲಯಗಳಲ್ಲಿ ಪೂಜಾರಿಗಳು ಮಾತ್ರ ಸಂಪ್ರದಾಯದಂತೆ ಸರಳ ಪೂಜೆ ಮಾಡಬಹುದು.

ಯಾವುದಕ್ಕೆ ನಿರ್ಬಂಧವಿಲ್ಲ…?
ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಯಾವುದೇ ನಿರ್ಬಂಧವಿಲ್ಲ.
ಕೈಗಾರಿಕೆಗಳಲ್ಲಿ ಕೆಲಸಕ್ಕೆ ತೆರಳುವವರು, ರಾತ್ರಿ ಪಾಳಿ ಕೆಲಸಕ್ಕೆ ಹೋಗುವವರು ಐಡಿ ತೋರಿಸಬೇಕು.
ನ್ಯಾಯಬೆಲೆ ಅಂಗಡಿ, ಆಹಾರ, ದಿನಸಿ, ಹಣ್ಣು ತರಕಾರಿ, ಡೇರಿ, ಹಾಲಿನ ಬೂತ್, ಮೀನು, ಮಾಂಸ ಮಾರಾಟ ಇರುತ್ತೆ.
ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಠ ಮಟ್ಟದ, ಅಗತ್ಯ ಪ್ರಮಾಣದ ಸಿಬ್ಬಂದಿ ಮಾತ್ರ ಕಚೇರಿಗೆ ಹಾಜರಾಗಬೇಕು. ಉಳಿದವರಿಗೆ ಮನೆಯಿಂದಲೇ ಕೆಲಸಕ್ಕೆ ವ್ಯವಸ್ಥೆ ಮಾಡಬೇಕು.
ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿ ಸಾಮಾನ್ಯ ಕೆಲಸಕ್ಕೆ ಉಳಿದ 50ರಷ್ಟು ಸಿಬ್ಬಂದಿ ಕೋವಿಡ್ ಡ್ಯೂಟಿಗೆ ಹಾಜರಾಗಬೇಕು.
ಆರೋಗ್ಯ ವೈದ್ಯಕೀಯ ಶಿಕ್ಷಣ, ಕಂದಾಯ, ಗೃಹ ಇಲಾಖೆ, ಅಗ್ನಿಶಾಮಕ ದಳ, ಕಾರಾಗೃಹ, ವಿಪತ್ತು ನಿರ್ವಹಣಾ ಸಿಬ್ಬಂದಿ, ಎಲ್ಲಾ ಡಿಸಿಗಳ ಕಚೇರಿ, ಬಿಬಿಎಂಪಿ ಸಿಬ್ಬಂದಿ, ಇತರೆ ಇಲಾಖೆಗಳ ಕೋವಿಡ್ ಸೇವಾ ಸಿಬ್ಬಂದಿಗೆ ಕೆಲಸಕ್ಕೆ ಹಾಜರಾಗಲು ಅವಕಾಶ.