ಜಿಲ್ಲೆಯಾದ್ಯಂತ 55 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ- 13,235 ವಿದ್ಯಾರ್ಥಿಗಳು ಹಾಜರು, 75 ಗೈರು

ಡುಪಿ: ಜಿಲ್ಲೆಯಾದ್ಯಂತ ಶುಕ್ರವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದ್ದು ಮೊದಲ ದಿನ ಯಾವುದೇ ಗೊಂದಲಗಳು ಇಲ್ಲದಂತೆ ನಡೆಯಿತು. 55 ಪರೀಕ್ಷಾ ಕೇಂದ್ರಗಳಲ್ಲಿ ಮಾತೃ ಭಾಷೆ ವಿಷಯದಲ್ಲಿ ನಡೆದ ಪರೀಕ್ಷೆಯಲ್ಲಿ 13,235 ವಿದ್ಯಾರ್ಥಿಗಳು ಹಾಜರಾಗಿದ್ದರು.75 ಮಂದಿ ಗೈರಾಗಿದ್ದರು.

ಬೆಳಿಗ್ಗೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಉಡುಪಿಯ ಬೋರ್ಡ್ ಹೈಸ್ಕೂಲ್ ಪರೀಕ್ಷಾ ಕೇಂದ್ರಕ್ಕೆ ಭೇಟಿನೀಡಿ ಸೌಲಭ್ಯಗಳ ಪರಿಶೀಲನೆ ನಡೆಸಿದರು. ಮುನ್ನೆಚ್ಚರಿಕಾ ಕ್ರಮಗಳ ಪಾಲನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭ ಡಿಡಿಪಿಐ ಗಣಪತಿ, ಡಯಟ್‌ ಅಧಿಕಾರಿ ಡಾ.ಅಶೋಕ್ ಕಾಮತ್ ಇದ್ದರು.

ಮೊದಲ ದಿನದ ಪರೀಕ್ಷೆಯಲ್ಲಿ ಬೈಂದೂರು ವಲಯದಿಂದ 1931 ವಿದ್ಯಾರ್ಥಿಗಳು ಹಾಜರಾಗಿದ್ದರೆ ನಾಲ್ವರು ಪರೀಕ್ಷೆಗೆ ಬಂದಿರಲಿಲ್ಲ. ಕುಂಧಾಪುರ ವಲಯದಿಂದ 2515 ಹಾಜರು 12 ಗೈರು, ಕಾರ್ಕಳ ವಲಯದಿಂದ 2529 ಹಾಜರು 2 ಗೈರು, ಉಡುಪಿ ಉತ್ತರ ವಲಯದಿಂದ 2668 ಹಾಜರು, 18 ಗೈರು, ಉಡುಪಿ ದಕ್ಷಿಣ ವಲಯದಿಂದ 3444 ಹಾಜರು, 13 ವಿದ್ಯಾರ್ಥಿಗಳು ಗೈರಾಗಿದ್ದರು.

ಮಾರ್ಚ್ 31 ರಿಂದ ಏ.15 ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಅಕ್ರಮಗಳು ನಡೆಯದಂತೆ ಬಿಗಿ ಭದ್ರತೆ ಒದಗಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಒಳಗೆ ಸ್ಮಾರ್ಟ್‌ ವಾಚ್‌ ಸೇರಿದಂತೆ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಬಳಕೆಗೆ ನಿರ್ಬಂಧ ಹಾಕಲಾಗಿದೆ.

ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಗ್ರಾಮೀಣ ಪ್ರದೇಶಗಳಿಂದ ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳು ಉಚಿತವಾಗಿ ಕೆಸ್‌ಆರ್‌ಟಿಸಿ ಬಸ್‌ಗಳಲ್ಲಿ ಬರಲು ಸರ್ಕಾರ ವ್ಯವಸ್ಥೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದರು.