ಆಂಧ್ರಪ್ರದೇಶದ ಹೌರಾ-ಚೆನ್ನೈ ಮಾರ್ಗದಲ್ಲಿ ರೈಲುಗಳ ಮಧ್ಯೆ ಡಿಕ್ಕಿ: 13 ಸಾವು; 50 ಜನರಿಗೆ ಗಾಯ

ಅಮರಾವತಿ: ಒಡಿಶಾದಲ್ಲಿ 280ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಮೂರು ರೈಲುಗಳ ಭೀಕರ ಡಿಕ್ಕಿ ನಡೆದ ತಿಂಗಳುಗಳ ಬಳಿಕ ಭಾನುವಾರದಂದು ಆಂಧ್ರಪ್ರದೇಶದ ಹೌರಾ-ಚೆನ್ನೈ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಸಿಗ್ನಲ್ ಅನ್ನು ದಾಟಿ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 13 ಜನರು ಸಾವನ್ನಪ್ಪಿದ್ದಾರೆ ಮತ್ತು 50 ಮಂದಿ ಗಾಯಗೊಂಡಿದ್ದಾರೆ.

ವಿಶಾಖಪಟ್ಟಣದಿಂದ ಪಲಾಸಕ್ಕೆ ಹೋಗುತ್ತಿದ್ದ ವಿಶೇಷ ಪ್ಯಾಸೆಂಜರ್ ರೈಲು ಸಿಗ್ನಲ್ ಇಲ್ಲದ ಕಾರಣ ಕೊತ್ಸವತ್ಸಲ ಬಳಿಯ ಅಳಮಂಡ ಮತ್ತು ಕಂಟಕಪಲ್ಲಿ ನಡುವೆ ಹಳಿಗಳ ಮೇಲೆ ನಿಂತಿದ್ದು, ವೈಜಾಗ್-ರಾಯಗಡ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದು ಮೂರು ಬೋಗಿಗಳನ್ನು ಹಳಿತಪ್ಪಿಸಿತು.

ಮಾನವ ದೋಷದಿಂದ ದುರಂತ ಸಂಭವಿಸಿದೆ ಎಂದು ರೈಲ್ವೆ ಮೂಲಗಳು ತಿಳಿಸಿದ್ದು, ಸಿಗ್ನಲಿಂಗ್ ಅನ್ನು ಲೋಕೋ ಪೈಲಟ್ ಗಮನಿಸಿರಲಿಲ್ಲ ಎಂದಿದೆ.

ಕೆಂದ್ರ ರೈಲ್ವೆ ಸಚಿವ ಅಶ್ವಿನಿ ವೈಷವ್ ದೆಹಲಿಯ ವಾರ್ ರೂಂ ನಿಂದ ಸ್ಥಿತಿಗತಿಗಳ ಅವಲೋಕನದಲ್ಲಿ ನಿರತರಾಗಿದ್ದಾರೆ.

ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಮತ್ತು ಮೃತರ ಕುಟುಂಬಗಳಿಗೆ 10 ಲಕ್ಷ, ಸಂತ್ರಸ್ತರಿಗೆ 2 ಲಕ್ಷ ಹಾಗೂ ಗಾಯಾಳುಗಳಿಗೆ 50 ಸಾವಿರ ಪರಿಹಾರ ಘೋಷಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಇಂದು ವಿಜಯನಗರ ಜಿಲ್ಲೆಯಲ್ಲಿ ರೈಲು ಅಪಘಾತ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.