ಕಾರವಾರ (ಉತ್ತರ ಕನ್ನಡ) :ಸರ್ಕಾರಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಇದಕ್ಕೆ ಉದಾಹರಣೆ ಎಂಬಂತೆ ಗಡಿ ಜಿಲ್ಲೆ ಉತ್ತರ ಕನ್ನಡದಲ್ಲಿ ಸರ್ಕಾರಿ ಶಾಲೆಗಳು ಅವನತಿಯತ್ತ ಸಾಗಿದ್ದು, ಕಳೆದ 6 ವರ್ಷಗಳಲ್ಲಿ ಬರೋಬ್ಬರಿ 13 ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳೇ ಇಲ್ಲದೇ ಬಾಗಿಲು ಮುಚ್ಚಿವೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ಸರ್ಕಾರ ನಾನಾ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ.ಕಾರವಾರದಲ್ಲಿ ಕನ್ನಡ ಶಾಲೆಗಳು ಅವನತಿಯತ್ತ ಸಾಗುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆ ಕೂಡ ಇಳಿಕೆಯಾಗಿದೆ.
ಹೌದು, ಕಾರವಾರ ಕರ್ನಾಟಕದ ಗಡಿ ಪ್ರದೇಶವಾಗಿದ್ದು, ಗೋವಾ ಗಡಿಯಲ್ಲಿ ಬರುವ ಕಾರವಾರ ತಾಲೂಕಿನಲ್ಲಿ ಕೊಂಕಣಿ, ಮರಾಠಿ ಭಾಷಿಗರು ಹೆಚ್ಚಿದ್ದರೂ ಸಹ ಕನ್ನಡ ಶಾಲೆಗಳಿಗೆ ಈ ಹಿಂದೆ ಸಾಕಷ್ಟು ಬೇಡಿಕೆ ಇತ್ತು. ಗಡಿಭಾಗದಲ್ಲಿ ಸರ್ಕಾರದ ಶಾಲೆಗಳು ಜೊತೆ ಹಲವು ಅನುಧಾನಿತ ಕನ್ನಡ ಶಾಲೆಗಳು ತಲೆ ಎತ್ತಿದ್ದವು. ಆದರೆ ಕಳೆದ ಕೆಲ ವರ್ಷದಿಂದ ಗಡಿ ಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತ ಬಂದಿದ್ದು ಹಲವು ಶಾಲೆಗಳು ಬಂದ್ ಆಗಿವೆ
ಇನ್ನು ಈ ಕುರಿತು ಸ್ಥಳೀಯರಾದ ಕಿಶನ್ ಕಾಂಬ್ಳೆ ಮಾತನಾಡಿ, ಗಡಿ ಭಾಗವಾದರು ಕನ್ನಡ ಶಾಲೆಗಳಿಗೆ ಕೆಲ ವರ್ಷಗಳ ಹಿಂದೆ ಸಾಕಷ್ಟು ಡಿಮ್ಯಾಂಡ್ ಇತ್ತು. ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಭಾಗದಿಂದ ಬಂದ ಜನರು ಕನ್ನಡ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುತ್ತಿದ್ದರು. ಆದರೆ ಕೆಲ ವರ್ಷದಿಂದ ಇಂಗ್ಲಿಷ್ ಮಾಧ್ಯಮ ಶಾಲೆಗಳು ಎಲ್ಲೆಂದರಲ್ಲಿ ತಲೆ ಎತ್ತಿದ್ದು, ಈ ಕಾರಣಕ್ಕೆ ವಿದ್ಯಾರ್ಥಿಗಳು ಕನ್ನಡ ಶಾಲೆಯತ್ತ ಮುಖ ಮಾಡುತ್ತಿಲ್ಲ ಎಂದರು.
2017-18 ನೇ ಸಾಲಿನಲ್ಲಿ ಮೂರು ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದ್ದರೆ, 2019-20 ನೇ ಸಾಲಿನಲ್ಲಿ ಎರಡು, 20-21 ನೇ ಸಾಲಿನಲ್ಲಿ ಒಂದು ಶಾಲೆ, 2021-22 ನೇ ಸಾಲಿನಲ್ಲಿ ಎರಡು ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಬಂದ್ ಆಗಿತ್ತು. 2022-23ನೇ ಸಾಲಿನಲ್ಲೂ ಎರಡು ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಶಾಲೆ ಬಂದ್ ಮಾಡಿದ್ದಾರೆ. ಸದ್ಯ ಪ್ರಸ್ತುತ ವರ್ಷ ತಾಲೂಕಿನ ಮೂರು ಶಾಲೆಗಳು ವಿದ್ಯಾರ್ಥಿಗಳೇ ಇಲ್ಲದೇ ಬಂದ್ ಆಗಿದ್ದು, ಇನ್ನು ಒಂದು ಅನುದಾನಿತ ಪ್ರೌಢಶಾಲೆ ಸಹ ಬಂದ್ ಆಗುವ ಹಂತಕ್ಕೆ ತಲುಪಿದೆ. ಇದಲ್ಲದೇ ಸುಮಾರು 10 ಶಾಲೆಗಳಲ್ಲಿ ಕೇವಲ ಇಬ್ಬಿಬ್ಬರು (ಪ್ರತಿ ಶಾಲೆಗೆ ಇಬ್ಬರು) ವಿದ್ಯಾರ್ಥಿಗಳು ದಾಖಲಾಗಿದ್ದು, ಗಡಿಭಾಗದಲ್ಲಿ ಕನ್ನಡ ಶಾಲೆಗಳು ಅವನತಿಯತ್ತ ಸಾಗುವಂತಾಗಿದೆ.
ಕಾರವಾರ ತಾಲೂಕಿನಲ್ಲಿ ಕೇವಲ ಎರಡೇ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಣವನ್ನ ಪ್ರಾರಂಭಿಸಲಾಗಿದೆ. ಶಿಕ್ಷಕರ ಕೊರತೆ ಹಾಗೂ ಇಂಗ್ಲಿಷ್ ಶಿಕ್ಷಕರ ಅಲಭ್ಯದಿಂದ ಇಂಗ್ಲಿಷ್ ಶಿಕ್ಷಣವನ್ನೂ ಕೊಡಲಾಗದೇ ಇರುವುದು ಸರ್ಕಾರಿ ಶಾಲೆಗಳು ಮುಚ್ಚಲು ಕಾರಣವಾಗಿದೆ. ಒಟ್ಟಿನಲ್ಲಿ ಗಡಿ ಭಾಗದಲ್ಲಿ ಉಳಿಸಿ ಬೆಳೆಸಬೇಕಾಗಿದ್ದ ಕನ್ನಡ ಶಾಲೆಗಳು ಪ್ರತಿವರ್ಷ ಶೂನ್ಯ ದಾಖಲಾತಿಯಿಂದ ಮುಚ್ಚುತ್ತ ಬರುತ್ತಿರುವುದು ನಿಜಕ್ಕೂ ದುರಂತವೇ. ಸರ್ಕಾರ ಈ ಬಗ್ಗೆ ಗಮನಹರಿಸಿ ಗಡಿ ಭಾಗದ ಶಾಲೆಗಳನ್ನು ಉಳಿಸಿ ಬೆಳೆಸಲು ಕ್ರಮ ಕೈಗೊಳ್ಳಬೇಕಾಗಿದೆ.
ಇನ್ನೊಂದೆಡೆ ಶಾಲೆಯಲ್ಲಿ ಶಿಕ್ಷಕರ ಕೊರೆತೆ ಇರುವುದರಿಂದ ಗೋವಾಕ್ಕೆ ಶಿಕ್ಷಣ ಪಡೆಯಲು ಹೋಗುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಗಡಿ ಭಾಗದ ಕನ್ನಡ ಶಾಲೆಯಲ್ಲಿ ಓದಿದ ಮಕ್ಕಳಿಗೆ ಉದ್ಯೋಗ ಪಡೆಯುವಾಗ ವಿಶೇಷ ಮೀಸಲಾತಿ ಕಲ್ಪಿಸುವುದರ ಜೊತೆಗೆ ಸವಲತ್ತನ್ನು ಹೆಚ್ಚಿಸಬೇಕು. ಅಲ್ಲದೇ ಗಡಿ ಭಾಗದ ಶಾಲೆಗಳಿಗೆ ಹೆಚ್ಚಿನ ಶಿಕ್ಷಕರನ್ನು ನಿಯೋಜನೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.