ಮಹಾರಾಷ್ಟ್ರದ ಲಾತೂರಿನಲ್ಲಿ 12 ನೇ ಶತಮಾನದ ಚಾಲುಕ್ಯ ಶಿಲಾಶಾಸನ ಪತ್ತೆ

ಲಾತೂರ್: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ನಿಲಂಗಾ ತಾಲ್ಲೂಕಿನ ಕಾಸರ್ ಬಾಲ್ಕುಂದ ಗ್ರಾಮದಲ್ಲಿ 12 ನೇ ಶತಮಾನದ್ದೆನ್ನಲಾದ ಕಲ್ಯಾಣದ ಚಾಲುಕ್ಯರ ಕಾಲದ ಕನ್ನಡ ಲಿಪಿಯ ಶಿಲಾಸನವೊಂದು ಪತ್ತೆಯಾಗಿದೆ. 24 ಸಾಲುಗಳ ಶಾಸನವು ಹಳೆಗನ್ನಡದಲ್ಲಿದೆ. ಮಹಾರಾಷ್ಟ್ರದ ವಿದ್ಯುತ್ ಉಪ ಕೇಂದ್ರದ ನಿರ್ವಾಹಕ ಕೃಷ್ಣ ತ್ರಯಂಬಕ ಗುಡಡೆ ಎನ್ನುವವರು ಈ ಶಾಸನವನ್ನು ಪತ್ತೆಹಚ್ಚಿದ್ದಾರೆ.

ಕೃಷ್ಣರವರು ಇದುವರೆಗೆ 10 ಶಿಲಾಸಾನಗಳನ್ನು ಪತ್ತೆ ಹಚ್ಚಿದ್ದು, ಇದರಲ್ಲಿ ಆರು ಕನ್ನಡ ಲಿಪಿಯಲ್ಲಿದ್ದರೆ, ಉಳಿದ ನಾಲ್ಕು ದೇವನಾಗರಿ ಲಿಪಿಯಲ್ಲಿದೆ. ಶಾಸನವು ಅದರ ಪ್ರತಿಷ್ಠಾಪನೆಯ ದಿನಾಂಕವನ್ನು ರೌದ್ರ ಸಂವತ್ಸರ ಎಂದು ಉಲ್ಲೇಖಿಸುತ್ತದೆ. ಕಲ್ಯಾಣಿ ಚಾಲುಕ್ಯ ಚಕ್ರವರ್ತಿ ಎರಡನೇ ಜಗದೇಕಮಲ್ಲನ ಆಳ್ವಿಕೆಯ ಮೂರನೇ ವರ್ಷದ ವೈಶಾಕ ಪೌರ್ಣಮಿಯ ಗುರುವಾರ ಅಂದರೆ 1140ರ ಮೇ 9 ರಂದು ಶಾಸನವನ್ನು ಪ್ರತಿಷ್ಠಾಪಿಸಲಾಗಿದೆ. ಶಾಸನದಲ್ಲಿ ‘ಪೃಥ್ವೀವಲ್ಲಭ’ ಮತ್ತು ‘ಮಹಾರಾಜಾಧಿರಾಜ’ ಬಿರುದಾಂಕಿತ ಎರಡನೇ ಜಗದೇಕಮಲ್ಲ ಗೋದಾವರಿ ನದೀವೀದಿಯಿಂದ ಆಳುತ್ತಿದ್ದನೆಂದು ಬರೆಯಲಾಗಿದೆ.

ವಿಷ್ಣು ಮತ್ತು ಶಿವ ಸ್ತೋತ್ರಗಳಿಂದ ಪ್ರಾರಂಭವಾಗುವ ಶಾಸನವು ಮಲ್ಲಾರ ಬಿಲಯ್ಯನೆನ್ನುವವನು ಸೋಮನಾಥ, ನಂದಿಕೇಶ್ವರ, ಕೇಶವ ಮತ್ತು ಸಪ್ತ ಮಾತ್ರಿಕೆ ದೇವಸ್ಥಾನವನ್ನು ಬೆಡ್ತಿಕೆರೆ ಬಲ್ಲಕುಕುಂಡೆಯಲ್ಲಿ ನಿರ್ಮಿಸಿದನು ಎಂದು ಉಲ್ಲೇಖಿಸಿದೆ. ಆತನು 25 ಮಟ್ಟಾರುಗಳನ್ನು(ಒಂದು ಮಟ್ಟಾರು ಅಂದರೆ ನಾಲ್ಕು ಎಕರೆ) ದೇವಸ್ಥಾನ ನಿರ್ಮಾಣಕ್ಕೆ ಹಾಗೂ ಎರಡು ಮಟ್ಟಾರುಗಳನ್ನು ಉಂಬಳಿಯಾಗಿ ದಾನ ನೀಡಿದನು ಎಂದು ಬರೆಯಲಾಗಿದೆ ಎಂದು ಲಿಪಿಯನ್ನು ವಿಸಂಕೇತಿಸಿರುವ ರವಿಕುಮಾರ್ ನಾಲಗುಂದ ಹೇಳಿದ್ದಾರೆ.

ಇವತ್ತು ಈ ಮಂದಿರದ ಜೀರ್ಣೋದ್ಧಾರ ಕಾರ್ಯ ನಡೆದಿದ್ದು, ಇದನ್ನು ತೀರ್ಥ ಮಹಾದೇವ ಮಂದಿರ ಎಂದು ಕರೆಯಲಾಗುತ್ತದೆ. ಇಲ್ಲಿಯ ಏಕೈಕ ದೇವರು ಮಹಾದೇವ. ಇನ್ನುಳಿದಂತೆ ಕೇಶವ ಮೂರ್ತಿ ಭಗ್ನವಾಗಿದ್ದು, ಸಪ್ತಮಾತ್ರಿಕೆಯರ ಪತ್ತೆಯೇ ಇಲ್ಲ. ದೇವಸ್ಥಾನದ ಹೊರಗಡೆ ಈ ಶಾಸನವು ಪತ್ತೆಯಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

9 ನೇ ಶತಮಾನದ ಕನ್ನಡದ ಮಹಾಕಾವ್ಯ ‘ಕವಿರಾಜಮಾರ್ಗ’ದಲ್ಲಿ ಕನ್ನಡ ನಾಡಿನ ಉಲ್ಲೇಖವಿದ್ದು, ಗೋದಾವರಿ ನದಿ ತಟದಿಂದ ಕಾವೇರಿ ತಟದವರೆಗೆ ಹಬ್ಬಿತ್ತು ಎನ್ನಲಾಗಿದೆ. ಈಗ ದೊರೆತಿರುವ ಈ ಶಿಲಾಶಾಸನದಿಂದ ಈ ಮಾತಿಗೆ ಇನ್ನಷ್ಟು ಪುಷ್ಟಿ ದೊರೆಯುತ್ತದೆ.