ಲಂಡನ್: 12ನೇ ವಿಶ್ವಕಪ್ ನಲ್ಲಿ ಪ್ರಶಸ್ತಿ ಗೆಲ್ಲುವ ಹಾಟ್ ಫೇವರಿಟ್ ಇಂಗ್ಲೆಂಡ್ ತಂಡ ಮೊದಲ ಪಂದ್ಯದಲ್ಲಿ ಭರ್ಜರಿ ಶುಭಾರಂಭ ಕಂಡಿದೆ. ಗುರುವಾರ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಇಂಗ್ಲೆಂಡ್ ದ.ಆಫ್ರಿಕಾ ತಂಡವನ್ನು 104 ರನ್ಗಳಿಂದ ಬಗ್ಗು ಬಡಿದಿದೆ.
ಟಾಸ್ ಗೆದ್ದ ದ.ಆಫ್ರಿಕಾ ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ 50 ಒವರ್ಗಳಲ್ಲಿ 311 ರನ್ ಕಲೆ ಹಾಕಿತು. ಜಾನಿ ಬೈರ್ಸ್ಟೋ ಸೊನ್ನೆಗೆ ಔಟಾದರೂ ಇಂಗ್ಲೆಂಡ್ ಪರ ಜೇಸನ್ ರಾಯ್, ಜೋ ರೂಟ್, ಮಾರ್ಗನ್, ಬೆನ್ ಸ್ಟೋಕ್ಸ್ ಉತ್ತಮ ಬ್ಯಾಟಿಂಗ್ ನಡೆಸಿದರು. ಈ ನಾಲ್ವರೂ ಅರ್ಧಶತಕವನ್ನು ಭಾರಿಸಿದರು. ಕೊನೆಯಲ್ಲಿ ಮೊಯಿನ್ ಆಲಿ ಹಾಗೂ ಬಟ್ಲರ್ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 311 ಪೇರಿಸಿತು.
ಈ ಗುರಿ ಬೆನ್ನತ್ತಿದ ದ.ಆಫ್ರಿಕಾ ಇಂಗ್ಲೆಂಡ್ ನ ಜೋಫ್ರಾ ಅರ್ಚರ್ ಘಾತಕ ಬೌಲಿಂಗ್ ಗೆ ನಲುಗಿ ಕೇವಲ 204 ರನ್ ಗಳಿಸಲಷ್ಟೇ ಶಕ್ತವಾಯಿತು. ಪ್ರಾರಂಭದಿಂದಲೇ ಅಮೋಘ ಬೌಲಿಂಗ್ ನಡೆಸಿದ ಅರ್ಚರ್ ತಾನು ಎಸೆದ 7 ಒವರ್ನಲ್ಲಿ ಪ್ರಮುಖ 3 ವಿಕೆಟ್ ಪಡೆದು ಮೊದಲ ಪಂದ್ಯದಲ್ಲೇ ಮಿಂಚಿದರು.
ದ. ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್ ಹಾಗೂ ವೆನ್ ಡರ್ ಡಸೆನ್ ತಲಾ ಅರ್ಧ ಶತಕ ಬಾರಿಸಿದ್ದು, ಹೊರತು ಪಡಿಸಿ ಉಳಿದ ಬ್ಯಾಟ್ಸ್ಮನ್ ಗಳು ಕೇವಲ ಬೆರಳೆಣಿಕೆಯಷ್ಟು ರನ್ ಗಳಿಸಲಷ್ಟೇ ಶಕ್ತರಾದರು. ಅಂತಿಮವಾಗಿ ದ. ಆಫ್ರಿಕಾ 39.5 ಓವರ್ನಲ್ಲಿ 204 ರನ್ಗೆ ತನ್ನೆಲ್ಲ ವಿಕಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.