ಹೊಸದಿಲ್ಲಿ : ಕರ್ನಾಟಕದ ಒಟ್ಟು 6,291 ಪ್ರಾಥಮಿಕ ಕೃಷಿ ಸಹಕಾರ ಸಂಘಗಳಲ್ಲಿ (ಪಿಎಸಿಎಸ್) 125 ಸಂಘಗಳು ದಿವಾಳಿ ಹಂತದಲ್ಲಿವೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಮಂಗಳವಾರ ಸಂಸತ್ತಿಗೆ ಮಾಹಿತಿ ನೀಡಿದರು.
ಲೋಕಸಭೆಯ ಮುಂದಿಟ್ಟ ದತ್ತಾಂಶದ ಪ್ರಕಾರ, ದಿವಾಳಿ ಹಂತದಲ್ಲಿರುವ 125 ಪ್ರಾಥಮಿಕ ಕೃಷಿ ಸಹಕಾರ ಸಂಘಗಳಲ್ಲಿ 28 ಸಹಕಾರಿ ಸಂಘಗಳು ಚಿಕ್ಕಬಳ್ಳಾಪುರದಲ್ಲಿವೆ. ನಂತರ 13 ಹಾಸನದಲ್ಲಿ ಮತ್ತು 12 ಬೆಳಗಾವಿಯಲ್ಲಿವೆ.ಅಮಿತ್ ಶಾ ಅವರ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 6,291 ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿದ್ದು, ಅವುಗಳಲ್ಲಿ 64 ಪ್ರಸ್ತುತ ಕಾರ್ಯನಿರ್ವಹಿಸುತ್ತಿಲ್ಲ. 125 ಸಂಘಗಳು ದಿವಾಳಿ ಹಂತದಲ್ಲಿವೆ ಎಂದು ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 428 ಹೊಸ ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ನೋಂದಾಯಿಸಲ್ಪಟ್ಟಿದೆ. ಅದರಲ್ಲಿ ಅತಿ ಹೆಚ್ಚು 187 ಬೆಳಗಾವಿಯಲ್ಲಿವೆ ಎಂದು ಅಮಿತ್ ಶಾ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಅಖಿಲ ಭಾರತ ಮಟ್ಟದಲ್ಲಿ 2024-25ರ ಆರ್ಥಿಕ ವರ್ಷದಲ್ಲಿ ದೇಶಾದ್ಯಂತ 4,964 ಪ್ರಾಥಮಿಕ ಕೃಷಿ ಸಹಕಾರ ಸಂಘಗಳನ್ನು ನೋಂದಾಯಿಸಲಾಗಿದೆ. ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (NCDC) 2024-25ರವರೆಗಿನ ಐದು ವರ್ಷಗಳಲ್ಲಿ ಕರ್ನಾಟಕದ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿಗೆ 25.56 ಕೋಟಿ ರೂ.ಗಳನ್ನು ವಿತರಿಸಿದೆ ಎಂದು ಸಚಿವರು ಹೇಳಿದರು.












