ನವದೆಹಲಿ: ಕೋವಿಡ್ 19 ನಿಂದಾಗಿ ಕುಸಿದಿರುವ ದೇಶದ ಆರ್ಥಿಕತೆಯನ್ನು ವೃದ್ಧಿಸಲು ಕೇಂದ್ರ ಸರ್ಕಾರ ಕೆಲವೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರಂತೆ ಮುಂದಿನ 50 ವರ್ಷಗಳಿಗೆ ರಾಜ್ಯಗಳಿಗೆ 12 ಸಾವಿರ ಕೋಟಿ ರೂ. ಬಡ್ಡಿ ರಹಿತ ಸಾಲ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈಶಾನ್ಯ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ₹ 2,500 ಕೋಟಿ ಪಡೆಯಲಿದೆ. ಇತರೆ ರಾಜ್ಯಗಳಿಗೆ 7,500 ಕೋಟಿ ರೂ. ಹಾಗೂ 2,000 ಕೋಟಿ ರೂ. ಗಳು ಕೇಂದ್ರದ ಮಾನದಂಡಗಳನ್ನು ಪೂರೈಸುವ ರಾಜ್ಯಗಳಿಗೆ ನೀಡಲಾಗುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹಬ್ಬದ ಅವಧಿಯಲ್ಲಿ ಕೇಂದ್ರ ಸರ್ಕಾರದ ನೌಕರರಿಗೆ ವೇತನದ ಒಂದು ಭಾಗವನ್ನು ಮುಂಗಡವಾಗಿ ಪಾವತಿಸುವುದಾಗಿ ತಿಳಿಸಿದ್ದಾರೆ. ಸರಕು ಮತ್ತು ಸೇವೆಗಳಿಗೆ ತಮ್ಮ ಸಂಬಳದ ಆದಾಯ-ತೆರಿಗೆ-ವಿನಾಯಿತಿ ಭಾಗವಾಗಿರುವ ಪ್ರಯಾಣ ಭತ್ಯೆಗಳನ್ನು ಖರ್ಚು ಮಾಡಲು ಸರ್ಕಾರ ತನ್ನ ಉದ್ಯೋಗಿಗಳಿಗೆ ಅವಕಾಶ ನೀಡುತ್ತದೆ ಎಂದು ಹೇಳಿದರು.