ಕಾಲ್ನಡಿಗೆಯಲ್ಲೇ 3,550 ಮೆಟ್ಟಿಲೇರಿ ಹರಕೆ ಪೂರೈಸಿದ 116 ವರ್ಷದ ಲಕ್ಷ್ಮವ್ವ: ಕರ್ನಾಟಕದ ಈ ಛಲಗಾತಿ ಅಜ್ಜಿಯ ಸಾಹಸಕ್ಕೆ ಬೆರಗಾದ ಭಕ್ತರು

ತಿರುಪತಿ: ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು ಕರ್ನಾಟಕ ಮೂಲದ ಶತಾಯುಷಿ ವೃದ್ಧೆ ಲಕ್ಷ್ಮವ್ವ ಅವರು ತಮ್ಮ ಅಪರೂಪದ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾರೆ. ಕುಟುಂಬ ಸದಸ್ಯರೊಂದಿಗೆ ತಿರುಮಲಕ್ಕೆ ಆಗಮಿಸಿದ ಅವರು, ಅಲಿಪಿರಿ ಮಾರ್ಗದ ಸುಮಾರು 3,550 ಮೆಟ್ಟಿಲುಗಳನ್ನು ಏರಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ತಲುಪಿರುವುದು ಭಕ್ತರಲ್ಲಿ ಆಶ್ಚರ್ಯ ಮೂಡಿಸಿದೆ.

ಸ್ಥಳೀಯವಾಗಿ ಭೀಮವ್ವ ಎಂದೂ ಕರೆಯಲ್ಪಡುವ ಲಕ್ಷ್ಮವ್ವ ಅವರಿಗೆ ಕುಟುಂಬಸ್ಥರ ಮಾಹಿತಿ ಪ್ರಕಾರ 116 ವರ್ಷ ವಯಸ್ಸಾಗಿದೆ. ಅವರ ಅಧಿಕೃತ ವಯಸ್ಸಿನ ದಾಖಲೆಗಳು ಲಭ್ಯವಾಗದಿದ್ದರೂ, ಶತಾಯುಷಿಯಾಗಿರುವುದು ವಿಡಿಯೊಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಇಳಿವಯಸ್ಸಿನಲ್ಲೂ ಯಾರ ನೆರವಿಲ್ಲದೆ ಅಲಿಪಿರಿ ಮೆಟ್ಟಿಲು ಮಾರ್ಗದಲ್ಲಿ ಸಾಗಿದ ಅವರು, ಕಣ್ಣಿನ ದೃಷ್ಟಿ ಸಮಸ್ಯೆಯಿದ್ದರೂ ಗೋಡೆಯನ್ನು ಆಸರೆಯಾಗಿ ಹಿಡಿದು ಮೆಟ್ಟಿಲುಗಳನ್ನು ಏರಿದ್ದಾರೆ. ಪ್ರಯಾಣದ ವೇಳೆ “ಗೋವಿಂದ, ಗೋವಿಂದ” ಎಂದು ನಾಮಸ್ಮರಣೆ ಮಾಡುತ್ತ ಸಾಗಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿವೆ.

ವೃದ್ಧೆಯ ಸಂಕಲ್ಪಕ್ಕೆ ಕುಟುಂಬಸ್ಥರು ಸಂಪೂರ್ಣ ಬೆಂಬಲ ನೀಡಿದ್ದು, ಅವರೊಂದಿಗೆ ತಿರುಮಲ ಯಾತ್ರೆಗೆ ತೆರಳಿದ್ದರು. ಲಕ್ಷ್ಮವ್ವ ಅವರ ಆತ್ಮವಿಶ್ವಾಸ, ಭಕ್ತಿ ಮತ್ತು ಮಾನಸಿಕ ದೃಢತೆಯನ್ನು ಕಂಡು ಇತರ ಯಾತ್ರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೃದ್ಧಾಪ್ಯದಲ್ಲೂ ಇಂತಹ ಸಾಧನೆ ಸಾಧ್ಯವಾಗಿರುವುದು ಶ್ರೀ ವೆಂಕಟೇಶ್ವರ ಸ್ವಾಮಿಯ ಅನುಗ್ರಹದಿಂದ ಎಂದು ಲಕ್ಷ್ಮವ್ವ ಭಾವಿಸುತ್ತಿದ್ದರೆ, ಅವರ ದೃಢ ಸಂಕಲ್ಪ, ಶಿಸ್ತುಬದ್ಧ ಜೀವನಶೈಲಿ ಮತ್ತು ಮಾನಸಿಕ ಬಲವೇ ಈ ಸಾಧನೆಗೆ ಕಾರಣ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ, 116ನೇ ವಯಸ್ಸಿನಲ್ಲೂ ತಿರುಮಲದ ಅಲಿಪಿರಿ ಮೆಟ್ಟಿಲುಗಳನ್ನು ಏರಿ ಕ್ಷೇತ್ರ ತಲುಪಿದ ಲಕ್ಷ್ಮವ್ವ ಅವರ ಪ್ರಯಾಣ ಅನೇಕ ಭಕ್ತರಿಗೆ ಮತ್ತು ಯುವಜನತೆಗೆ ಸ್ಫೂರ್ತಿಯಾಗಿದೆ. ವಯಸ್ಸಿಗಿಂತ ಮನೋಬಲವೇ ಮುಖ್ಯ ಎಂಬ ಸಂದೇಶವನ್ನು ಅವರು ತಮ್ಮ ಜೀವನದ ಮೂಲಕ ಸಾರಿದ್ದಾರೆ.