ನವದೆಹಲಿ: ಭಾರತ ಸರ್ಕಾರದ ‘ವೆಹಿಕಲ್ ಸ್ಕ್ರ್ಯಾಪಿಂಗ್ ಪಾಲಿಸಿ’ ಪ್ರಕಾರ 15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಗುಜರಿಗೆ ಹಾಕುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಗೃಹ ಸಚಿವಾಲಯ ಕ್ರಮಗಳನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. 15 ವರ್ಷಕ್ಕಿಂತ ಹಳೆಯದಾದ ಎಲ್ಲ ವಾಹನಗಳನ್ನು ವಿಲೇವಾರಿ ಮಾಡುವ ಕೇಂದ್ರ ಸರ್ಕಾರದ ನೀತಿಯ ಭಾಗವಾಗಿ ಬಿಎಸ್ಎಫ್, ಸಿಆರ್ಪಿಎಫ್ ಮತ್ತು ಸಿಐಎಸ್ಎಫ್ನಂಥ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆ (ಸಿಎಪಿಎಫ್) ಸೇರಿದ 11,000 ವಾಹನಗಳನ್ನು ಗುಜರಿಗೆ ಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕೇಂದ್ರ ಸಶಸ್ತ್ರ ಪಡೆಗಳಿಗೆ ಸೇರಿದ 11 ಸಾವಿರ ಹಳೆಯ ವಾಹನಗಳನ್ನು ಗುಜರಿಗೆ ಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ, 15 ವರ್ಷಕ್ಕಿಂತ ಹಳೆಯದಾದ ಸಿಎಪಿಎಫ್ನ ಸುಮಾರು 11,000 ವಾಹನಗಳನ್ನು ಗುರುತಿಸಲಾಗಿದೆ ಮತ್ತು ಈ ವಾಹನಗಳನ್ನು ಹಂತ ಹಂತವಾಗಿ ಗುಜರಿಗೆ ಹಾಕಲಾಗುವುದು ಎಂದು ಅವರು ಹೇಳಿದರು.
ರಾಜ್ಯಗಳ ಪೊಲೀಸ್ ಸಂಸ್ಥೆಗಳಲ್ಲಿರುವ ಹಾಳಾದ ವಾಹನಗಳನ್ನು ಸ್ಕ್ರ್ಯಾಪ್ ಮಾಡುವಂತೆ ಮತ್ತು ಅವುಗಳ ಬದಲಾಗಿ ಉತ್ತಮ ತಂತ್ರಜ್ಞಾನದ ಮತ್ತು ಇಂಧನ ಕ್ಷಮತೆಯ ಹೊಸ ವಾಹನಗಳನ್ನು ಖರೀದಿಸುವಂತೆ ಕೇಂದ್ರ ಗೃಹ ಸಚಿವಾಲಯವು ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಮನವಿ ಮಾಡಿದೆ.
ಹೊಸ ವಾಹನ ಸ್ಕ್ರ್ಯಾಪೇಜ್ ನೀತಿ – 2021 ಅನ್ನು ಪ್ರಧಾನಿ ನರೇಂದ್ರ ಮೋದಿ ಗುಜರಾತ್ನಲ್ಲಿ ನಡೆದ ಹೂಡಿಕೆದಾರರ ಶೃಂಗಸಭೆಯಲ್ಲಿ ಘೋಷಿಸಿದ್ದರು. ರಸ್ತೆಗಳಲ್ಲಿ ಸಂಚರಿಸಲು ಯೋಗ್ಯವಲ್ಲದ ವಾಹನಗಳನ್ನು ಗುರುತಿಸುವುದು ವಾಹನ ಸ್ಕ್ರ್ಯಾಪೇಜ್ ನೀತಿಯ ಉದ್ದೇಶವಾಗಿದೆ.
ಹೆಸರೇ ಸೂಚಿಸುವಂತೆ ಹೊಸ ಸ್ಕ್ರ್ಯಾಪೇಜ್ ನೀತಿಯಡಿ ಮಾಲಿನ್ಯ ಉಂಟುಮಾಡುವ ಮತ್ತು ಪರಿಸರಕ್ಕೆ ಹಾನಿ ಮಾಡುವ ಹಳೆಯ ಮತ್ತು ಅನರ್ಹ ವಾಹನಗಳನ್ನು ಗುಜರಿಗೆ ಹಾಕಲಾಗುವುದು. 15 ಮತ್ತು 20 ವರ್ಷಕ್ಕಿಂತ ಹಳೆಯದಾದ ವಾಣಿಜ್ಯ ಮತ್ತು ಪ್ರಯಾಣಿಕರ ವಾಹನಗಳು ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲವಾದಾಗ ಅವುಗಳ ನೋಂದಣಿಯನ್ನು ರದ್ದುಗೊಳಿಸಲಾಗುತ್ತದೆ.
ಸಿಎಪಿಎಫ್ಗಳಲ್ಲಿ ಬಿಎಸ್ಎಫ್, ಸಿಆರ್ಪಿಎಫ್, ಸಿಐಎಸ್ಎಫ್, ಐಟಿಬಿಪಿ, ಎಸ್ಎಸ್ಬಿ, ಎನ್ಎಸ್ಜಿ ಮತ್ತು ಅಸ್ಸೋಂ ರೈಫಲ್ಸ್ ಸೇರಿವೆ. ಗೃಹ ಸಚಿವಾಲಯದ ಅಂದಾಜಿನ ಪ್ರಕಾರ, ಸಿಎಪಿಎಫ್ಗಳು ಒಟ್ಟಾಗಿ 1 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಹೊಂದಿದ್ದು, ಅವುಗಳನ್ನು ದೇಶದ ವಿವಿಧ ಭಾಗಗಳಲ್ಲಿ ಅನೇಕ ಕಾರ್ಯಗಳಲ್ಲಿ ನಿಯೋಜಿಸಲಾಗಿದೆ. ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೆಹಲಿ ಸಾರಿಗೆ ಇಲಾಖೆ 2023 ರ ಜನವರಿ 31 ರವರೆಗೆ 54 ಲಕ್ಷಕ್ಕೂ ಹೆಚ್ಚು ವಾಹನಗಳ ನೋಂದಣಿ ರದ್ದುಗೊಳಿಸಿದೆ. ಕೇಂದ್ರ ಸರ್ಕಾರ ಗುರುವಾರ ಸಂಸತ್ತಿಗೆ ಈ ಮಾಹಿತಿ ನೀಡಿದೆ.