ಭರತ್ಪುರ: ರಾಜಸ್ಥಾನದ ಭರತ್ಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಮತ್ತು 12 ಮಂದಿ ಗಾಯಗೊಂಡಿದ್ದಾರೆ. ಬಸ್ ರಾಜಸ್ಥಾನದ ಪುಷ್ಕರ್ನಿಂದ ಉತ್ತರ ಪ್ರದೇಶದ ವೃಂದಾವನಕ್ಕೆ ತೆರಳುತ್ತಿದ್ದಾಗ ಮುಂಜಾನೆ 4.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೇತುವೆ ಮೇಲೆ ಬಸ್ ಕೆಟ್ಟು ನಿಂತಿದ್ದಾಗ ಈ ಘಟನೆ ನಡೆದಿದೆ. ಬಸ್ ಚಾಲಕ ಮತ್ತು ಕೆಲವು ಪ್ರಯಾಣಿಕರು ಬಸ್ನ ಹಿಂದೆ ನಿಂತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಟ್ರಕ್ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಬದುಕುಳಿದವರು ಹೇಳಿದ್ದಾರೆ.
ಬಸ್ ನಲ್ಲಿ ಇಂಧನ ಖಾಲಿಯಾಗಿದ್ದರಿಂದ ಲಖನ್ಪುರ ಪ್ರದೇಶದ ಅಂಟ್ರಾ ಫ್ಲೈಓವರ್ನಲ್ಲಿ ಬಸ್ ನಿಂತಿತ್ತು. ಇದೇ ವೇಳೆಗೆ ಟ್ರಕ್ ಡಿಕ್ಕಿ ಹೊಡೆದಿದ್ದು ಐವರು ಪುರುಷರು ಮತ್ತು ಆರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿಎಂಎನ್ಆರ್ಎಫ್ನಿಂದ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಅನುಮೋದಿಸಿದ್ದಾರೆ.
ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರು ಮೃತರ ಸಂಬಂಧಿಕರಿಗೆ ತಲಾ 4 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ.
ಅಪಘಾತದ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆಯ ಬಗ್ಗೆ ರಾಜಸ್ಥಾನ ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದಾರೆ.