ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ, ಜಾರಿ ನಿರ್ದೇಶನಾಲಯ ಮತ್ತು ಸ್ಥಳೀಯ ಪೊಲೀಸರು ಗುರುವಾರ ಮಹಾರಾಷ್ಟ್ರ, ತಮಿಳುನಾಡು, ಕೇರಳ, ಉತ್ತರ ಪ್ರದೇಶ ಮತ್ತು ಅಸ್ಸಾಂ ಸೇರಿದಂತೆ 11 ರಾಜ್ಯಗಳಾದ್ಯಂತ ಶಂಕಿತ ಭಯೋತ್ಪಾದಕ-ಧನಸಹಾಯ ಚಟುವಟಿಕೆಗಳನ್ನು ಹತ್ತಿಕ್ಕಲು ಏಕಕಾಲದಲ್ಲಿ ದಾಳಿಗಳನ್ನು ಪ್ರಾರಂಭಿಸಿದ್ದು, ಬೆಳಗಿನ ಜಾವ 3.30ರಿಂದ ಇದುವರೆಗೆ ದಾಳಿ ಮುಂದುವರಿದಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 100ಕ್ಕೂ ಹೆಚ್ಚು ನಾಯಕರನ್ನು ಈ ದಾಳಿಯಲ್ಲಿ ಬಂಧಿಸಲಾಗಿದೆ.
ಕೇರಳ (22) ಮಹಾರಾಷ್ಟ್ರ ಮತ್ತು ಕರ್ನಾಟಕ (ತಲಾ 20), ತಮಿಳುನಾಡು (10), ಅಸ್ಸಾಂ (9), ಉತ್ತರ ಪ್ರದೇಶ (8), ಆಂಧ್ರಪ್ರದೇಶ (5) ಮಧ್ಯಪ್ರದೇಶ (4) ಪುದುಚೇರಿ (3) ರಾಜಸ್ಥಾನ (2) ದೆಹಲಿ (3) ಒಟ್ಟು 106 ಪಿ.ಎಫ್.ಐ ನಾಯಕರನ್ನು ಬಂಧಿಸಲಾಗಿದೆ.
ಕೇರಳದಲ್ಲಿ ಸಂಘಟನೆಯ ಅಧ್ಯಕ್ಷ ಸಲಾಂ ಮತ್ತು ಕೇರಳ ಘಟಕದ ಪದಾಧಿಕಾರಿಗಳಾದ ರಾಜ್ಯ ಮುಖ್ಯಸ್ಥ ಸಿಪಿ ಮಹಮ್ಮದ್ ಬಶೀರ್, ರಾಷ್ಟ್ರೀಯ ಕಾರ್ಯದರ್ಶಿ ವಿಪಿ ನಜರುದ್ದೀನ್ ಮತ್ತು ರಾಷ್ಟ್ರೀಯ ಮಂಡಳಿ ಸದಸ್ಯ ಪಿ ಕೋಯಾ ಇವರನ್ನು ಬಂಧಿಸಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಗೃಹ ಕಾರ್ಯದರ್ಶಿ ಮತ್ತು ಎನ್ಐಎ ಮಹಾನಿರ್ದೇಶಕರನ್ನು ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ.