ರಾಷ್ಟ್ರೀಯ ಮುಕ್ತ ಮಾಸ್ಟರ್ಸ್ ಅಥ್ಲೆಟಿಕ್ಸ್: 100 ಮೀಟರ್ ರೇಸನ್ನು 45.40 ಸೆಕೆಂಡುಗಳಲ್ಲಿ ಓಡಿ ದಾಖಲೆ ನಿರ್ಮಿಸಿದ 105 ವರ್ಷದ ಸೂಪರ್ ಗ್ರ್ಯಾನಿ!!

ವಡೋದರಾ: ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ 105 ವರ್ಷದ ಸೂಪರ್ ಗ್ರ್ಯಾನಿ(ಅಜ್ಜಿ) 45.40 ಸೆಕೆಂಡುಗಳಲ್ಲಿ 100 ಮೀಟರ್ ಓಟವನ್ನು ಪೂರ್ಣಗೊಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇದು ಈ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಆವೃತ್ತಿಯಾಗಿದ್ದು, ಹರಿಯಾಣ ದಾದ್ರಿ ಜಿಲ್ಲೆಯ ರಾಮ್ ಬಾಯಿ ಎನ್ನುವ 105 ವರ್ಷ ವಯಸ್ಸಿನ ಅಜ್ಜಿಯೊಬ್ಬರು ಯಾರೂ ಊಹಿಸಲಾಗದ ದಾಖಲೆಯನ್ನು ನಿರ್ಮಿಸಿ ಸೂಪರ್ ಗ್ರ್ಯಾನಿ ಆಗಿ ಹೊರಹೊಮ್ಮಿದ್ದಾರೆ.

ಒಂದು ದಾಖಲೆಯಿಂದ ತೃಪ್ತರಾಗದ ಸೂಪರ್ ಅಜ್ಜಿ ವಿದೇಶದಲ್ಲಿ ಸ್ಪರ್ಧಿಸುವ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ.

“ಇದು ತುಂಬಾ ಸಂತೋಷ ನೀಡುವ ಭಾವನೆ ಮತ್ತು ನಾನು ಮತ್ತೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುತ್ತೇನೆ” ಎಂದು ಸ್ಪ್ರಿಂಟ್‌ನಲ್ಲಿ ಗೋಲ್ಡನ್ ಡಬಲ್ ಗೆದ್ದ ಭಾರತೀಯ ಅಥ್ಲೆಟಿಕ್ಸ್‌ನ ಅತ್ಯಂತ ಹಿರಿಯ ಮಹಿಳೆ ರಾಮ್ ಬಾಯಿ ಹೇಳಿದ್ದಾರೆ. ಮುಂದೆ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸುವುದು ಆಕೆಯ ಮುಂದಿನ ಗುರಿಯಾಗಿದೆ. ಈ ನಿಟ್ಟಿನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ರಾಮ್ ಬಾಯಿ ಯೋಚನೆ ಮಾಡುತ್ತಿದ್ದಾರೆ.

ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ. ಬಲವಾದ ಆಸೆ ಹಾಗೂ ಇಚ್ಛಾಶಕ್ತಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ರಾಮ್ ಬಾಯಿ ಸಾಬೀತುಪಡಿಸಿದ್ದಾರೆ. ಸೂಪರ್ ಅಜ್ಜಿಯ ಅದ್ಭುತ ಸಾಧನೆಯನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ ಮತ್ತು ಜಗತ್ತಿನಾದ್ಯಂತದ ವಯೋವೃದ್ದರಿಗೆ ಆದರ್ಶವಾಗಿ ಹೊರಹೊಮ್ಮಿದ್ದಾರೆ.

ರಾಮ್ ಬಾಯಿ ಈ ಹಿಂದೆ 101 ವರ್ಷದ ಮನ್ ಕೌರ್ ಮಾಡಿದ್ದ ದಾಖಲೆಯನ್ನು ಮುರಿದಿದ್ದಾರೆ. ಕೌರ್ 100 ಮೀಟರ್ ಓಟವನ್ನು 74 ಸೆಕೆಂಡುಗಳಲ್ಲಿ ಮುಗಿಸಿದ್ದರು. ಜನವರಿ 1, 1917 ರಂದು ಜನಿಸಿದ ರಾಮ್ ಬಾಯಿ ಆ ದಾಖಲೆಯನ್ನು ಮುರಿದಿದ್ದಾರೆ. ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ 85 ವರ್ಷಕ್ಕಿಂತ ಹೆಚ್ಚಿನ ವಿಭಾಗದಲ್ಲಿ ಸ್ಪರ್ಧಿಸಿದ ಏಕೈಕ ವ್ಯಕ್ತಿಯಾಗಿ ರಾಮ್ ಬಾಯಿ.