ಶತಮಾನ ಕಂಡ ಎಂಸಿಸಿ ಬ್ಯಾಂಕ್: 1000 ಕೋಟಿ ರೂಪಾಯಿ ಮೈಲಿಗಲ್ಲು ದಾಟಿದ ಸಂಭ್ರಮಾಚರಣೆ

ಮಂಗಳೂರು: 1912 ರಲ್ಲಿ ಕ್ರೈಸ್ತ ಸಮಾಜದ ಅದ್ವಿತೀಯ ಸಮಾಜಮುಖಿ ಧುರೀಣ ಪಿ.ಎಫ್.ಎಕ್ಸ್ ಸಲ್ಡಾನ್ಹಾ ಇವರ ನೇತೃತ್ವದಲ್ಲಿ ಹತ್ತು ಸಾವಿರ ರೂಪಾಯಿ ಬಂಡವಾಳದೊಂದಿಗೆ ಸೊಸೈಟಿಯಾಗಿ ಆರಂಭಗೊಂಡ ಎಂಸಿಸಿ ಬ್ಯಾಂಕ್ ಇಂದು ಸಾವಿರ ಕೋಟಿ ರುಪಾಯಿ ವಹಿವಾಟಿನ ಸಹಕಾರಿ ಕ್ಷೇತ್ರದ ಅಗ್ರಮಾನ್ಯ ಬ್ಯಾಂಕಾಗಿ ಅಭಿವೃದ್ದಿಯ ಪಥದಲ್ಲಿ ಮುನ್ನುಗ್ಗುತ್ತಿದೆ. ಬ್ಯಾಂಕಿನ ಪ್ರಸ್ತುತ ಅಧ್ಯಕ್ಷ ಅನಿಲ್ ಲೋಬೊ ನ್ಟೇತೃತ್ವದ ಆಡಳಿತ ಮಂಡಳಿ ಬ್ಯಾಂಕಿನ ಚುಕ್ಕಾಣಿ ಹಿಡಿದ ಮೇಲೆ, ಬ್ಯಾಂಕಿನ ಸರ್ವಾಂಗೀಣ ಪ್ರಗತಿ ಇಮ್ಮಡಿಯಾಗಿದೆ. 2018 ರಲ್ಲಿ ಬರೀ 503 ಕೋಟಿ ರುಪಾಯಿ ಇದ್ದ ಬ್ಯಾಂಕಿನ ವ್ಯವಹಾರ ಐದೇ ವರ್ಷದ ಅವಧಿಯಲ್ಲಿ 1000 ಕೋಟಿ ರುಪಾಯಿ ದಾಟಿರುವುದೇ ಬ್ಯಾಂಕಿನ ಸರ್ವಾಂಗೀಣ ಪ್ರಗತಿಗೆ ಸಾಕ್ಷಿ.

ಕಳೆದ ಐದು ವರ್ಷಗಳ ಅವಧಿಯಲ್ಲಿ ಅನಿಲ್ ಲೋಬೊ ನೇತೃತ್ವದ ಆಡಳಿತ ಮಂಡಳಿಯ ಪ್ರಮುಖ ಸಾಧನೆಗಳು :

■ ಬ್ಯಾಂಕಿನ ಆರ್ಥಿಕ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯಾಗಿ ಬ್ಯಾಂಕಿನ 112 ವರ್ಷಗಳ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ 1.37 ಶೇಕಡಾಕ್ಕೆ ಎನ್.ಪಿ.ಎ. ಇಳಿಸಿ ನಿವ್ವಳ ಲಾಭ 10.38 ಕೋಟಿ ದಾಖಲಿಸಿದ್ದು.
■ 2002 ರಲ್ಲಿ ಕೇವಲ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 16 ಶಾಖೆಗಳಿಗೆ ಸ್ಥಗಿತಗೊಂಡಿದ್ದ ಬ್ಯಾಂಕಿನ ವಿಸ್ತರಣೆಯನ್ನು ಸಪ್ತ ಜಿಲ್ಲೆಗಳಿಗೆ ( ದ. ಕ. & ಉಡುಪಿ ಜೊತೆಗೆ ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಮತ್ತು ಕೊಡಗು) ವಿಸ್ತರಿಸಿದ್ದು.
■ ಪ್ರತ್ಯೇಕ ಘಟಕ ನಿರ್ಮಾಣ, ಸಹಮಿಲನ, ಸಮಾವೇಶ ಮುಂತಾದ ವಿಶೇಷ ಕಾರ್ಯಕ್ರಮಗಳ ಮೂಲಕ ಅನಿವಾಸಿ ಭಾರತೀಯ ಖಾತೆಗಳಿಗೆ ಚುರುಕು ಮುಟ್ಟಿಸಿ, ಕರಾವಳಿಯ ಸಹಕಾರಿ ರಂಗದ ಬ್ಯಾಂಕುಗಳಲ್ಲಿ ಅನಿವಾಸಿ ಭಾರತೀಯರಿಗೆ ಸೇವೆ ಒದಗಿಸುತ್ತಿರುವ ಏಕೈಕ ಬ್ಯಾಂಕ್ – ಎಂಸಿಸಿ ಬ್ಯಾಂಕ್ ಎಂಬ ಮನ್ನಣೆ ದೊರಕಿಸಿ ಕೊಟ್ಟದ್ದು.
■ ಬ್ಯಾಂಕಿನ 112 ವರ್ಷಗಳ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಿಗೆ ಸಹಕಾರಿ ರತ್ನ ಪ್ರಶಸ್ತಿಯ ಹಿರಿಮೆಗೆ ಪಾತ್ರವಾಗಿಸಿದ್ದು.
2018 ರಲ್ಲಿ ಕೇವಲ 503 ಕೋಟಿ ರುಪಾಯಿ ಇದ್ದ ವ್ಯವಹಾರ 1000 ಕೋಟಿಗೆ ತಲಪಿಸಿದ್ದು.

1000 ಕೋಟಿ ವ್ಯವಹಾರ ಬ್ಯಾಂಕಿನ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಆಗಿರುವುದರಿಂದ ಜನವರಿ 21 MILESTONE ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಅನಿವಾಸಿ ಉದ್ಯಮಿ, ಸಮಾಜಸೇವಕ ಮತ್ತು ಮಹಾದಾನಿ ಮೈಕಲ್ ಡಿ ಸೊಜಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಹಿರಿಯ ಲೆಕ್ಕ ಪರಿಷೋಧಕ ರುಡೋಲ್ಫ್ ರೊಡ್ರಿಗಸ್ ದಿಕ್ಸೂಚಿ ಭಾಷಣ ಮಾಡಿದರು. ಮಿಲಾಗ್ರಿಸ್ ಚರ್ಚಿನ ಪ್ರಧಾನ ಗುರು ವಂ। ಬೊನವೆಂಚರ್ ನಜ್ರೆತ್, ಮಾಜಿ ವಿದಾನ ಸಭಾ ಸದಸ್ಯ ಜೆ. ಆರ್. ಲೋಬೊ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೊಜಾ, ಖ್ಯಾತ ಉದ್ಯಮಿ ರೋಹನ್ ಮೊಂತೇರೊ, ಸಮಾಜಮುಖಿ ನಾಯಕ ಪಿಯುಸ್ ಎಲ್. ರೊಡ್ರಿಗಸ್ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿದ್ದರು.

ಮೈಲಿಗಲ್ಲು ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಾಮಾಜಿಕ ಜವಾಬ್ದಾರಿ ಪಾಲನೆಯ ಭಾಗವಾಗಿ – ಶಿಕ್ಷಣದಿಂದ ವಂಚಿತರಾದ ಮಕ್ಕಳು, ಹಿರಿಯ ನಾಗರಿಕರು, ಪೋಷಕರು ಇಲ್ಲದ ಮಕ್ಕಳು ಮುಂತಾದ ಅಶಕ್ತರನ್ನು ಆರೈಕೆ ಮಾಡುವ ಸಂಘ ಸಂಸ್ಥೆಗಳಾದ ಉಡುಪಿ ಪಾಂಬೂರಿನ ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರ, ಸುರಕ್ಷ ಚಾರಿಟೇಬಲ್ ಟ್ರಸ್ಟ್, ಕಾರ್ಕಳ, ಪ್ರಜ್ಞ ಚಿಣ್ಣರ ತಂಗುದಾಮ ಕೇಂದ್ರ, ಕಾಪಿಕಾಡ್, ಮಂಗಳೂರು ಇವರಿಗೆ ದೇಣಿಗೆಯನ್ನು ನೀಡಲಾಯಿತು ಹಾಗೂ ಭವಿಷ್ಯದ ಯೋಜನೆಗಳಾದ ಇ-ಲಾಬಿ, ಪಾಸ್ ಬುಕ್ ಕಿಯೋಸ್ಕ್, Personalized Cheque Book, ಮೈಲಿಗಲ್ಲು ಸಾಧನೆಯ ವಿಶೇಷ ಕೊಡುಗೆಗಳನ್ನು ಅನಾವರಣ ಮಾಡಲಾಯಿತು. ಬ್ಯಾಂಕಿನ ಬುಲೆಟಿನ್ ನಾಲ್ಕನೇ ಸಂಚಿಕೆಯನ್ನೂ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.. ಬ್ಯಾಂಕಿನ ಗ್ರಾಹಕರ ಶುಭದಿನಗಳ ಆಚರಣೆ, ಪ್ರಶಸ್ತಿ ಪುರಸ್ಕಾರ ಪಡೆದವರನ್ನು ಗುರುತಿಸಿ ಗೌರವಿಸಲಾಯಿತು..

ಕಾರ್ಯಕ್ರಮದಲ್ಲಿ ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾದ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಇವರನ್ನು ಸನ್ಮಾನಿಸಲಾಯಿತು.. ಲಘು ಸಂಗೀತ ಮತ್ತು ಸಹಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.