ಪ್ರತಿ ಒಂದು ಕಿ.ಗ್ರಾಂ ತೂಕ ಇಳಿಕೆಗೆ 1000 ಕೋಟಿ ರೂ ಅಭಿವೃದ್ದಿ ಪ್ಯಾಕೇಜ್: ಗಡ್ಕರಿ ಚಾಲೆಂಜಿಗೆ 15 ಕಿಲೋ ತೂಕ ಇಳಿಸಿಕೊಂಡ ಉಜ್ಜಯನಿ ಸಂಸದ

ನವದೆಹಲಿ: ಕ್ಷೇತ್ರದ ಅಭಿವೃದ್ಧಿಗಾಗಿ ಬಜೆಟ್‌ ನೀಡುವಂತೆ ಉಜ್ಜಯನಿ ಸಂಸದ ಅನಿಲ್ ಫಿರೋಜಿಯಾ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ನಿರಂತರವಾಗಿ ಒತ್ತಾಯಿಸುತ್ತಿದ್ದರು. ಆಗ ಗಡ್ಕರಿ, ಅನಿಲ್ ತಮ್ಮ ತೂಕ ಇಳಿಸಿಕೊಂಡರೆ ಪ್ರತಿ ಕಿಲೋಗ್ರಾಂಗೆ ಬದಲಾಗಿ 1000 ಸಾವಿರ ಕೋಟಿ ರೂಗಳ ಬಜೆಟ್‌ ಅನ್ನು ಕ್ಷೇತ್ರದ ಅಭಿವೃದ್ಧಿಗಾಗಿ ಬಿಡುಗಡೆ ಮಾಡುವುದಾಗಿ ಷರತ್ತನ್ನು ಮುಂದಿಟ್ಟಿದ್ದರು. ಈ ಷರತ್ತನ್ನು ಸ್ವೀಕರಿಸಿರುವ ಅನಿಲ್, ಇದೀಗ 15 ಕಿಲೋ ತೂಕ ಇಳಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇದೀಗ ಅನಿಲ್ ಕೇಂದ್ರ ಸಾರಿಗೆ ಸಚಿವ ಗಡ್ಕರಿಯವರಿಂದ 15 ಸಾವಿರ ಕೋಟಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಫಂಡ್ ಫಾರ್ ಫ್ಲ್ಯಾಬ್ ಗಾಗಿ ತಾನು ಬಜೆಟ್ ನೀಡುತ್ತೇನೆ ಎನ್ನುವ ವಾಗ್ದಾನವನ್ನು ನಿತಿನ್ ಗಡ್ಕರಿ ಮಾಡಿದ್ದರು. ತಾನೂ ಕೂಡಾ ಧಡೂತಿಯಾಗಿದ್ದೆ, ಆದರೆ ಈಗ ತೂಕ ಇಳಿಸಿಕೊಂಡಿದ್ದೇನೆ. ಅದರಂತೆ ಅನಿಲ್ ಫಿರೋಜಿಯಾ ಕೂಡಾ ತೂಕ ಇಳಿಸಿಕೊಂಡರೆ ಪ್ರತಿ ಕಿಲೋ ಇಳಿಸಿಕೊಂಡ ತೂಕಕ್ಕೆ 1000 ಸಾವಿರ ಕೋಟಿ ರೂ ಅಭಿವೃದ್ದಿ ಪ್ಯಾಕೇಜ್ ನೀಡುತ್ತೇನೆ ಎಂದಿದ್ದರು. ಅನಿಲ್ ಎರಡೂವರೆ ತಿಂಗಳಲ್ಲಿ 15 ಕಿಲೋ ತೂಕ ಇಳಿಸಿಕೊಂಡಿದ್ದು, ಮುಂದೆ ಇನ್ನೂ ಹೆಚ್ಚು ತೂಕ ಇಳಿಸಿ ಹೆಚ್ಚು ಬಜೆಟ್ ಪಡೆದುಕೊಳ್ಳುತ್ತೇನೆ ಎನ್ನುತ್ತಿದ್ದಾರೆ.