ದ.ಕ ಜಿಲ್ಲೆಯ ನಕ್ಸಲ್ ಕೇಂದ್ರಿತ ಬಾಂಜಾರುಮಲೆಯಲ್ಲಿ ಶೇ.100 ಮತದಾನದ ದಾಖಲೆ

ಬೆಳ್ತಂಗಡಿ: ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಎಂಬಂತೆ ಶೇ.100 ಮತದಾನ ಮಾಡುವ ಮೂಲಕ ನಕ್ಸಲ್ ಕೇಂದ್ರಿತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾಂಜಾರುಮಲೆ ದಾಖಲೆ ‌ನಿರ್ಮಿಸಿದೆ.

ಮತಗಟ್ಟೆ ಸಂಖ್ಯೆ 86 ರ ಸಮುದಾಯ ಭವನದಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇಲ್ಲಿ 51 ಮಹಿಳೆಯರು, 60 ಪುರುಷರು ಸೇರಿ ಒಟ್ಟು 111 ಮತದಾರರಿದ್ದಾರೆ.

ಕಳೆದ ಬಾರಿ 2019 ರಲ್ಲಿ ಇಲ್ಲಿ ಶೇ.99 ಮತದಾನವಾಗಿತ್ತು. ಈ ಬಾರಿ ಜಿಲ್ಲಾ ಸ್ವೀಪ್ ಸಮಿತಿ ಮಾರ್ಗದರ್ಶನದಂತೆ ಬೆಳ್ತಂಗಡಿ ತಾಲೂಕಿನ ಸ್ವೀಟ್ ಸಮಿತಿ ಅಧ್ಯಕ್ಷ ವೈಜಣ್ಣ ಹಾಗೂ ತಂಡ ಶೇ.100 ಮತದಾನ ಮಾಡುವಂತೆ ಊರ ಜನರಲ್ಲಿ ಜಾಗೃತಿ ಮೂಡಿಸಿತ್ತು. ಇದರ ಪರಿಣಾಮವಾಗಿ ಆಧುನಿಕ ಸುಖ ಸೌಲಭ್ಯ ಹಾಗೂಮೂಲಸೌಕರ್ಯವಿಲ್ಲದ ಪುಟ್ಟ ಉರೊಂದು ಎಲ್ಲರಿಗೂ ಮಾದರಿಯಾಗಿದೆ.