10 ಎಕರೆ ಸರ್ಕಾರಿ ಗೇರು ತೋಪಿಗೆ ಬೆಂಕಿ: ಅಪಾರ ಹಾನಿ

ಕುಂದಾಪುರ: ಇಲ್ಲಿನ ಹೆಮ್ಮಾಡಿ ಜನತಾ ಪ್ರೌಢ ಶಾಲಾ ಸಮೀಪದ ಗೇರು ತೋಪಿಗೆ ಸೋಮವಾರ ಮಧ್ಯಾಹ್ನದ ಸುಮಾರಿಗೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ.

ಸೋಮವಾರ ಮಧ್ಯಾಹ್ನ ಗೇರು ತೋಪಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸಮೀಪದ ಮನೆಯವರ ಗಮನಕ್ಕೆ ಬಂದಿದೆ. ಕೂಡಲೇ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ ಮನೆಯವರು ಗಿಡಗಳ ಸಹಾಯದಿಂದ ಬೆಂಕಿ ನಂದಿಸುವ ಪ್ರಯತ್ನ ಮಾಡಿದರೂ ಬೆಂಕಿಯನ್ನು ಹತೋಟಿಗೆ ತರಲು ಸಾಧ್ಯವಾಗಿಲ್ಲ. ಕುಂದಾಪುರ ಅಗ್ನಿಶಾಮಕ ದಳದವರು ಸ್ಥಳೀಯರ ಜೊತೆಗೂಡಿ ಸುಮಾರು ಒಂದುವರೆ ಗಂಟೆಗಳ ಕಾರ್ಯಾಚರಣೆ ನಡೆಸಿದ ಬಳಿಕ ಬೆಂಕಿಯನ್ನು ಹತೋಟಿಗೆ ತರಲಾಯಿತು. ಸೋಮವಾರ ಮಧ್ಯಾಹ್ನ ಭಾರೀ ಗಾಳಿ ಇದ್ದುದರಿಂದ ಬೆಂಕಿ 10ಎಕರೆಗೂ ಮಿಕ್ಕಿ ಗೇರು ತೋಟವನ್ನು ವ್ಯಾಪಿಸಿದೆ. ಬೆಂಕಿಯ ಕೆನ್ನಾಲಗಗೆ ಗೇರು ಗಿಡಗಳು ಸುಟ್ಟು ಕರಕಲಾಗಿದ್ದು ಅಪಾರ ಹಾನಿ ಸಂಭವಿಸಿದೆ.

ಜನತಾ ಪ್ರೌಢ ಶಾಲೆಯ ಸಮೀಪದ ಸರ್ಕಾರಿ ಗೇರು ತೋಪಿನಲ್ಲಿ ಅನೈತಿಕ ಚಟುವಟಿಕೆಗಳು ಹಾಗೂ ಇಸ್ಪೀಟ್ ದಂಧೆ ನಡೆಯುತ್ತಿದೆ ಎನ್ನಲಾಗುತ್ತಿದ್ದು, ಜುಗಾರಿ ಆಡಲು ಬಂದವರೇ ಧೂಮಪಾನ ಮಾಡಿ ಎಸೆದಿರುವ ಬೆಂಕಿಯ ಕಿಡಿಯಿಂದ ಬೆಂಕಿ ಹೊತ್ತಿಕೊಂಡಿದೆ ಎಂಬ ಮಾತುಗಳು ಸ್ಥಳೀಯವಾಗಿ ಹರಿದಾಡತೊಡಗಿದೆ.