ಹೆಮ್ಮಾಡಿ: ಪ್ರಗತಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ದಶಮಾನೋತ್ಸವ, ಅಂಪಾರು ಶಾಖೆ ಉದ್ಘಾಟನೆ

ಕುಂದಾಪುರ: ಹೆಮ್ಮಾಡಿಯ ಪ್ರಗತಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ದಶಮಾನೋತ್ಸವ ಸಂಭ್ರಮ ಹಾಗೂ ಅಂಪಾರಿನ ಪ್ರಶಾಂತ್ ಕಾಂಪ್ಲೆಕ್ಸ್ ನಲ್ಲಿ ಆರಂಭಗೊಂಡ ಅಂಪಾರು ಶಾಖೆಯ ಉದ್ಘಾಟನೆ ಸೋಮವಾರ ನಡೆಯಿತು.

ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಶಾಖೆಯನ್ನು ಉದ್ಘಾಟಿಸಿ ಶುಭಹಾರೈಸಿ ಮಾತನಾಡಿ, ಯಾವುದೇ ಸಹಕಾರಿ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯಲು ಗ್ರಾಹಕರ ಸಹಕಾರ ಬಹಳ ಮುಖ್ಯ. ಸಿಬ್ಬಂದಿ ಮತ್ತು ಗ್ರಾಹಕರ ಉತ್ತಮ ಬಾಂಧವ್ಯದಿಂದ ಸಂಘವು ಒಳ್ಳೆಯ ರೀತಿಯಲ್ಲಿ ಮುನ್ನಡೆಯಲು ಸಾಧ್ಯ ಎಂದರು.

ಭದ್ರತಾ ಕೋಶವನ್ನು ಉದ್ಘಾಟಿಸಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಮಹಿಳೆಯರೇ ಮುಂದಾಳತ್ವ ವಹಿಸುವ ಸಹಕಾರಿ ಸಂಸ್ಥೆಗಳು ಯಶಸ್ವಿಯಾಗಿ ಮುನ್ನಡೆಯುತ್ತಿವೆ. ಮಹಿಳಾ ಸಶಕ್ತೀಕರಣ ನಿಟ್ಟಿನಲ್ಲಿ ಆರಂಭಗೊಂಡ ಈ ಸಂಸ್ಥೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆಯನ್ನು ಆರಂಭಿಸಿ, ಯಶಸ್ಸು ಗಳಿಸಲಿ ಎಂದರು.

ಠೇವಣಿ ಪತ್ರವನ್ನು ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಗಣಕೀಕರಣ ವ್ಯವಸ್ಥೆಯನ್ನು ಬೆಂಗಳೂರಿನ ವ್ಯಾಪ್ಸ್ ಗ್ರೂಪ್ ಆಫ್ ಕಂಪೆನಿಯ ಚೇರ್ ಮನ್ ಸಿದ್ದೇಶ್ ಆರ್., ಸಾಲ ಪತ್ರವನ್ನು ಎಸ್ ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಎಸ್. ರಾಜು ಪೂಜಾರಿ ಬಿಡುಗಡೆಗೊಳಿಸಿದರು.

ಬೈಂದೂರಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಸಹಕಾರ ಸಂಘಗಳ ಉಪ ನಿಬಂಧಕ ಜಿ.ಎನ್. ಲಕ್ಷ್ಮೀನಾರಾಯಣ, ಕುಂದಾಪುರದ ಸಹಾಯಕ ನಿಬಂಧಕಿ ಲಾವಣ್ಯ. ಕೆ‌.ಎಸ್., ಕುಂದಾಪುರ ತಾ.ಪಂ. ಯೋಜನಾಧಿಕಾರಿ ಅರುಣ್ ಕುಮಾರ್ ಎಸ್. ವಿ., ಅಂಪಾರು ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ, ಕುಂದನಾಡು ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ, ಗುತ್ತಿಗೆದಾರ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ತುಮಕೂರಿನ ಈಶ್ವರೀ ಆಗ್ರೋ ಟೆಕ್ ನ ನವೀನ್ ಕುಮಾರ್ ಶೆಟ್ಟಿ ಶಾನ್ಕಟ್ಟು, ಕಟ್ಟಡದ ಮಾಲಕ ಎ. ರಾಜೀವ ಶೆಟ್ಟಿ, ಉಪಾಧ್ಯಕ್ಷೆ ಕುಸುಮಾ ಆರ್. ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಸಾಧು ಎಸ್. ಬಿಲ್ಲವ ಪ್ರಸ್ತಾವನೆಗೈದು, ಸಿಇಒ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಸ್ವಾಗತಿಸಿದರು. ಡಿಸಿಸಿ ಬ್ಯಾಂಕ್ ನ ನವೋದಯ ಸಂಘದ ಮೇಲ್ವಿಚಾರಕ ಮನೋಹರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಶಾಖಾ ಪ್ರಬಂಧಕ ಅಭಿಜಿತ್ ಶೆಟ್ಟಿ ವಂದಿಸಿದರು.