ಬೈರೂತ್: ಪೂರ್ವ ಸಿರಿಯಾದಲ್ಲಿ ಶನಿವಾರ ನಡೆದ ವೈಮಾನಿಕ ದಾಳಿಯಲ್ಲಿ ಇರಾನ್ ಪರವಾದ 10 ಉಗ್ರರು ಹತ್ಯೆಗೀಡಾಗಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯನ್ನು ಅಮೆರಿಕ ಪಡೆಗಳು ಎಸಗಿರಬಹುದು ಎನ್ನಲಾಗಿದೆ.30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸಿರಿಯಾದಲ್ಲಿ ಮಾನವ ಹಕ್ಕುಗಳ ಕುರಿತಾದ ವೀಕ್ಷಣಾಲಯ ತಿಳಿಸಿದೆ. ಈ ಘಟನೆಯಲ್ಲಿ ಸಿರಿಯಾದ ಮೂವರು ಸೇರಿ 10 ಇರಾನ್ ಪರವಾದ ಯೋಧರು ಮೃತಪಟ್ಟಿದ್ದಾರೆ.
ಇಸ್ರೇಲ್-ಹಮಾಸ್ ಬಂಡುಕೋರರ ಮಧ್ಯೆ ಯುದ್ಧ ಆರಂಭವಾದಾಗಿನಿಂದಲೂ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕ ಪಡೆಗಳ ಮೇಲೆ ದಾಳಿಗಳು ಹೆಚ್ಚುತ್ತಿದ್ದು, ಇದಕ್ಕೆ ಟೆಹರಾನ್ ಪರವಾದ ಉಗ್ರರೇ ಕಾರಣವೆಂದು ಅಮೆರಿಕ ಆರೋಪಿಸುತ್ತಾ ಬಂದಿದೆ. ಅಲ್ಬು ಕಮಾಲ್ ಮತ್ತು ಇರಾಕ್ ಗಡಿಯಲ್ಲಿರುವ ಡೀರ್ ಎಜ್ಜಾರ್ ಪ್ರಾಂತ್ಯದ ಸುತ್ತಮುತ್ತಲ ಪ್ರದೇಶಗಳು ಈ ದಾಳಿಯ ಗುರಿಯಾದ್ದವು. ಇರಾಕ್ಗೆ ಸೇರಿದ ಯುದ್ಧ ಸಾಮಗ್ರಿಗಳು ಮತ್ತು ಶಸ್ತ್ರಾಸ್ತ್ರಗಳನ್ನು ಇಟ್ಟಿದ್ದ ಗೋದಾಮು ಮೇಲೂ ದಾಳಿ ನಡೆದಿದೆ ಎಂದು ಬ್ರಿಟನ್ ಮೂಲದ ವೀಕ್ಷಣಾಲಯ ತಿಳಿಸಿದೆ.