ರಾಜ್ಯ ಸರ್ಕಾರದಿಂದ ಸುವರ್ಣ ತ್ರಿಭುಜ ದೋಣಿ ದುರಂತದ ಮೀನುಗಾರರ ಕುಟುಂಬಕ್ಕೆ ₹ 10 ಲಕ್ಷ ಹೆಚ್ಚುವರಿ ಪರಿಹಾರ: ಯಶ್‍ಪಾಲ್ ಸುವರ್ಣ ಸ್ವಾಗತ

ಉಡುಪಿ: ಸುವರ್ಣ ತ್ರಿಭುಜ ಬೋಟ್ ದುರಂತದಲ್ಲಿ ಮೃತಪಟ್ಟ 7 ಮೀನುಗಾರರ ಕುಟುಂಬಗಳಿಗೆ ವಿಶೇಷ ಪ್ರಕರಣದಡಿಯಲ್ಲಿ ಹೆಚ್ಚುವರಿ ಪರಿಹಾರವಾಗಿ ತಲಾ 10 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ ರಾಜ್ಯ ಸರಕಾರದ ನಿರ್ಧಾರವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಯಶ್‍ಪಾಲ್ ಸುವರ್ಣ ಸ್ವಾಗತಿಸಿದ್ದಾರೆ.

ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿ ಕಣ್ಮರೆಯಾದ 7 ಮಂದಿ ಮೀನುಗಾರರ ಕುಟುಂಬಸ್ಥರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಮಾಡಿದ ಮನವಿಗೆ ಸ್ಪಂದಿಸಿ, ಮೀನುಗಾರರ ಬಗ್ಗೆ ತಮ್ಮ ಕಾಳಜಿಯನ್ನು ಪ್ರದರ್ಶಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ ಹಾಗೂ ಪರಿಹಾರ ಮಂಜೂರಾತಿಗೆ ವಿಶೇಷ ಮುತುವರ್ಜಿ ವಹಿಸಿದ ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ.

ಮೀನುಗಾರರ ಮುಖಂಡರಾದ ನಾಡೋಜ ಡಾ. ಜಿ. ಶಂಕರ್, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು, ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ ರಘುಪತಿ ಭಟ್ ಹಾಗೂ ಕರಾವಳಿಯ ಎಲ್ಲಾ ಶಾಸಕರಿಗೆ ಸಮಸ್ತ ಮೀನುಗಾರರ ಪರವಾಗಿ ಧನ್ಯವಾಗಳನ್ನು ಸಲ್ಲಿಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.