ಭಾರತದಲ್ಲಿ ಶೇ 10ರಷ್ಟು ಹೆಚ್ಚಳ : ವಿಶ್ವದಲ್ಲಿ ಚಿನ್ನಕ್ಕೆ ಬೇಡಿಕೆ ಕುಸಿತ

ನವದೆಹಲಿ: 2023ರ ಮೂರನೇ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಚಿನ್ನದ ಬೇಡಿಕೆಯು ಶೇ 6ರಷ್ಟು ಕುಸಿದು 1,147.5 ಟನ್​ಗಳಿಗೆ ತಲುಪಿದೆ ಎಂದು ವರ್ಲ್ಡ್​ ಗೋಲ್ಡ್​ ಕೌನ್ಸಿಲ್ (ಡಬ್ಲ್ಯುಜಿಸಿ) ಮಂಗಳವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. ಚಿನ್ನದ ಗಟ್ಟಿಗಳು ಮತ್ತು ನಾಣ್ಯಗಳ ಬೇಡಿಕೆ ಕಡಿಮೆಯಾಗಿರುವುದು ಮತ್ತು ಕೇಂದ್ರೀಯ ಬ್ಯಾಂಕುಗಳಿಂದ ಖರೀದಿ ಕಡಿಮೆಯಾದ ಹಿನ್ನೆಲೆಯಲ್ಲಿ ಚಿನ್ನಕ್ಕೆ ಬೇಡಿಕೆ ಇಳಿಮುಖವಾಗಿದೆ.
2023ರ ಮೂರನೇ ತ್ರೈಮಾಸಿಕದಲ್ಲಿ ವಿಶ್ವದಲ್ಲಿ ಚಿನ್ನದ ಬೇಡಿಕೆ ಕಡಿಮೆಯಾಗಿದೆ.

ಜಾಗತಿಕವಾಗಿ ಚಿನ್ನದ ಗಟ್ಟಿ ಮತ್ತು ನಾಣ್ಯಗಳ ಬೇಡಿಕೆ ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 14ರಷ್ಟು ಕುಸಿದು 296.2 ಟನ್​ಗಳಿಗೆ ತಲುಪಿದೆ. ಮತ್ತೊಂದೆಡೆ, ಒಟ್ಟು ಚಿನ್ನದ ಪೂರೈಕೆಯು ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 6 ರಷ್ಟು ಏರಿಕೆಯಾಗಿ 1,267.1 ಟನ್​ಗಳಿಗೆ ತಲುಪಿದೆ. ಮೂರನೇ ತ್ರೈಮಾಸಿಕದಲ್ಲಿ ಗಣಿ ಉತ್ಪಾದನೆ ದಾಖಲೆಯ 971 ಟನ್ ತಲುಪಿದೆ. ಈ ಅವಧಿಯಲ್ಲಿ ಮರುಬಳಕೆ ಮಾಡಿದ ಚಿನ್ನದ ಪ್ರಮಾಣವು ವರ್ಷದಿಂದ ವರ್ಷಕ್ಕೆ 289 ಟನ್​ಗಳಿಗೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನವು ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆಯಲ್ಲಿ ಶೇಕಡಾ 11ರಷ್ಟು ಕುಸಿತ ದಾಖಲಿಸಿದ್ದು, ಹಿಂದಿನ ವರ್ಷದ ಅವಧಿಯಲ್ಲಿ ಇದ್ದ 13 ಟನ್​ಗಳಿಂದ 11.6 ಟನ್‌ಗಳಿಗೆ ತಲುಪಿದೆ. ಆದಾಗ್ಯೂ, ನೆರೆಯ ಶ್ರೀಲಂಕಾದ ಚಿನ್ನದ ಬೇಡಿಕೆ 0.3 ಟನ್ ಗಳಿಂದ 2.4 ಟನ್‌ಗಳಿಗೆ ಎಂಟು ಪಟ್ಟು ಹೆಚ್ಚಾಗಿದೆ.ಚೀನಾದ ವಿಷಯದಲ್ಲಿ ನೋಡುವುದಾದರೆ, ಕಳೆದ ವರ್ಷದ ಇದೇ ಅವಧಿಯಲ್ಲಿ ಆಗಿದ್ದ 242.7 ಟನ್ ಚಿನ್ನದ ಖರೀದಿಗೆ ಹೋಲಿಸಿದರೆ ಚೀನಾ ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಚಿನ್ನದ ಖರೀದಿಯಲ್ಲಿ ಅಲ್ಪ ಏರಿಕೆ ಕಂಡು 247 ಟನ್‌ಗಳಿಗೆ ತಲುಪಿದೆ.ಆದರೆ, ಭಾರತದಲ್ಲಿ ಮಾತ್ರ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿರುವುದು ಗಮನಾರ್ಹ. ಚೀನಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಚಿನ್ನ ಬಳಸುವ ರಾಷ್ಟ್ರವಾದ ಭಾರತದಲ್ಲಿ ಮೂರನೇ ತ್ರೈಮಾಸಿಕದಲ್ಲಿ ಚಿನ್ನ ಖರೀದಿ ಶೇಕಡಾ 10ರಷ್ಟು ಎರಡಂಕಿ ಬೆಳವಣಿಗೆಯಾಗಿದ್ದು, ಖರೀದಿಯ ಪ್ರಮಾಣ 210.2 ಟನ್​ಗಳಿಗೆ ತಲುಪಿದೆ.

ಡಬ್ಲ್ಯುಜಿಸಿ ವರದಿಯ ಪ್ರಕಾರ, ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ವಿಶ್ವದ ಚಿನ್ನದ ಆಭರಣ ಬೇಡಿಕೆ ಶೇಕಡಾ 1ರಷ್ಟು ಕುಸಿದು 578.2 ಟನ್​ಗಳಿಗೆ ತಲುಪಿದೆ. “ಚಿನ್ನದ ಬೆಲೆ ಹೆಚ್ಚಾಗಿರುವುದು ಮತ್ತು ಆರ್ಥಿಕ ಅನಿಶ್ಚಿತತೆಯ ವಾತಾವರಣಗಳ ಕಾರಣದಿಂದ ವರ್ಷದಿಂದ ವರ್ಷಕ್ಕೆ ಚಿನ್ನದ ಬೇಡಿಕೆ ಕುಸಿತಕ್ಕೆ ಕಾರಣವಾಗಿದೆ” ಎಂದು ಡಬ್ಲ್ಯುಜಿಸಿ ವರದಿ ತಿಳಿಸಿದೆ.