10 ವರ್ಷಗಳ ಬಳಿಕ ವಾಹನ ಚಾಲನಾ ತರಬೇತಿ ಶುಲ್ಕ ಪರಿಷ್ಕರಣೆ: ದುಬಾರಿಯಾಗಲಿದೆ ವಾಹನ ಚಾಲನಾ ತರಬೇತಿ

ಬೆಂಗಳೂರು: ರಾಜ್ಯದ ಡ್ರೈವಿಂಗ್ ಸ್ಕೂಲ್‌ಗಳಲ್ಲಿ ವಾಹನ ಚಾಲನಾ ತರಬೇತಿ ಶುಲ್ಕವನ್ನು 10 ವರ್ಷಗಳ ಬಳಿಕ ಪರಿಷ್ಕರಿಸಲಾಗಿದ್ದು, 2024ರ ಜನವರಿ 1 ರಿಂದ ಚಾಲ್ತಿಗೆ ಬರಲಿದೆ. ಈ ಪರಿಷ್ಕರಣೆಯೊಂದಿಗೆ ವಾಹನ ಚಾಲನಾ ತರಬೇತಿ ಶುಲ್ಕವು 800 ರೂಪಾಯಿಯಿಂದ 3,000 ರೂಪಾಯಿಗೆ ಏರಿಕೆಯಾಗಲಿದೆ ಎಂದು ಎಚ್.ಟಿ ವರದಿ ಮಾಡಿದೆ.

ಕರ್ನಾಟಕದಲ್ಲಿ ಡೈವಿಂಗ್ ಸ್ಕೂಲ್‌ಗಳಲ್ಲಿ ತರಬೇತಿ ಶುಲ್ಕವನ್ನು ಹೆಚ್ಚಿಸುವುದಕ್ಕೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ, ವಾಹನ ಚಾಲನಾ ತರಬೇತಿ 2024ರ ಜ.1ರಿಂದ ಕೊಂಚ ದುಬಾರಿಯಾಗಲಿದೆ. ಕಾರು ಚಾಲನೆ ಕಲಿಯಲು 7,000 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.

ವಾಹನ ಚಾಲನಾ ತರಬೇತಿಯನ್ನು ಲಘುಮೋಟಾರು ವಾಹನ, ಮೋಟಾರು ಸೈಕಲ್, ಆಟೋ ರಿಕ್ಷಾ ಹಾಗೂ ಸಾರಿಗೆ ವಾಹನಗಳೆಂದು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗಿದೆ. ಈ ವರ್ಗಗಳಿಗೆ ಅನುಗುಣವಾಗಿ ಶುಲ್ಕ ನಿಗದಿ ಮಾಡಿದ್ದು, ಲಘು ಮೋಟಾರು ವಾಹನ (ಕಾರು, ಜೀಪು ಇತ್ಯಾದಿ) ಚಾಲನಾ ತರಬೇತಿಗೆ ಪರಿಷ್ಕೃತ ದರ 7,000 ರೂಪಾಯಿ. ಕಲಿಕಾ ಪರವಾನಗಿಗೆ 350 ರೂಪಾಯಿ, ಚಾಲನಾ ಪರವಾನಗಿಗೆ 1,000 ರೂಪಾಯಿಯನ್ನು ಪ್ರತ್ಯೇಕವಾಗಿ ಆರ್‌ಟಿಒ ಕಚೇರಿಯಲ್ಲಿ ಪಾವತಿಸಬೇಕು. ಲಘು ಮೋಟಾರು ವಾಹನ (ಕಾರು, ಜೀಪು ಇತ್ಯಾದಿ) ಚಾಲನಾ ತರಬೇತಿಗೆ ಒಟ್ಟು 8,350 ರೂಪಾಯಿ ಖರ್ಚಾಗಲಿದೆ.

ಪ್ರಸ್ತುತ ಲಘು ಮೋಟಾರು ವಾಹನ (ಕಾರು, ಜೀಪು ಇತ್ಯಾದಿ) ಚಾಲನಾ ತರಬೇತಿಗೆ 4,000 ರೂಪಾಯಿ ಶುಲ್ಕ ಇದ್ದು, ಕಲಿಕಾ ಪರವಾನಗಿ, ಚಾಲನಾ ಪರವಾನಗಿ ಶುಲ್ಕ ಸೇರಿ 8,000 ರೂಪಾಯಿಯನ್ನು ಡ್ರೈವಿಂಗ್ ಸ್ಕೂಲ್‌ಗಳು ಕಲಿಕಾರ್ಥಿಯಿಂದ ಪಡೆಯುತ್ತಿವೆ. ಡೈವಿಂಗ್ ಸ್ಕೂಲ್ ಗಳ ನಿರ್ವಹಣೆ, ಇಂಧನ ಬಳಕೆ, ಕಲಿಕೆ ವೇಳೆ ವಾಹನಗಳಿಗಾಗುವ ಹಾನಿ, ಇನ್ಸುರೆನ್ಸ್, ಚಾಲಕರ ಸಂಬಳ ಇನ್ನಿತರ ಅಂಶಗಳನ್ನು ಇದಕ್ಕಾಗಿ ಪರಿಗಣಿಸಲಾಗುತ್ತದೆ.

ಪ್ರಸ್ತುತ ಮೋಟಾರು ಸೈಕಲ್‌ ವಾಹನ ಚಾಲನಾ ತರಬೇತಿಗೆ 2,200 ರೂಪಾಯಿ ಶುಲ್ಕ ಇದ್ದು, ಇದು 3,000 ರೂಪಾಯಿ ಆಗಲಿದೆ. ಆಟೋ ರಿಕ್ಷಾ ಚಾಲನಾ ತರಬೇತಿಗೆ 3,000 ರೂಪಾಯಿ ಶುಲ್ಕ ಇದ್ದು, ಇನ್ನು ಮುಂದೆ 4,000 ರೂಪಾಯಿ ಆಗಲಿದೆ. ಕಾರು ಮತ್ತು ಇತರೆ ಲಘು ವಾಹನಗಳ ಚಾಲನಾ ತರಬೇತಿಗೆ ಈಗ 4,000 ರೂಪಾಯಿ ಶುಲ್ಕ ಇದ್ದು, ಇದು 7,000 ರೂಪಾಯಿ ಆಗಲಿದೆ. ಅದೇ ರೀತಿ ಸಾರಿಗೆ ವಾಹನ ಚಾಲನಾ ತರಬೇತಿಗೆ 6,000 ರೂಪಾಯಿ ಶುಲ್ಕ ಇದ್ದು, ಇದು 9,000 ರೂಪಾಯಿ ಆಗಲಿದೆ.

ಸರ್ಕಾರವು ಡೈವಿಂಗ್ ಸ್ಕೂಲ್‌ಗಳಲ್ಲಿ ತರಬೇತಿ ಶುಲ್ಕವನ್ನು ಹೆಚ್ಚಿಸುವುದಕ್ಕೆ ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಆರ್‌ಟಿಒಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಎರಡು ವರ್ಷ ಹಿಂದೆ ವರದಿ ಸಲ್ಲಿಸಿತ್ತು. ಈ ವರದಿಯನ್ನು ಆಧರಿಸಿ ಈಗ ಸರ್ಕಾರ ದರ ಪರಿಷ್ಕರಣೆಗೆ ಆದೇಶ ಹೊರಡಿಸಿದೆ.