10 ದಿನಕ್ಕೆ ಕಾಲಿಟ್ಟ ಕೊರಗರ ಅಹೋರಾತ್ರಿ ಧರಣಿ ಸತ್ಯಾಗ್ರಹ; ಸ್ಪೀಕರ್ ಯು.ಟಿ. ಖಾದರ್ ಭೇಟಿ

ಉಡುಪಿ: ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಹಾಗೂ ಕೃಷಿಭೂಮಿ ಹಕ್ಕುಪತ್ರ ಮಂಜೂರಾತಿಗೆ ಆಗ್ರಹಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ 10 ದಿನಕ್ಕೆ ಕಾಲಿಟ್ಟಿದೆ. ಇಂದು ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು, ಧರಣಿ ನಿರತರ ಬೇಡಿಕೆಗಳ ಮನವಿ ಸ್ವೀಕರಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯುಟಿ ಖಾದರ್ ಅವರು, ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗ ಹಾಗೂ ಕೃಷಿಭೂಮಿ ನೀಡಬೇಕೆಂಬ ಬೇಡಿಕೆಗಳ ಕುರಿತು ಆ.15ರ ಬಳಿಕ ಬೆಂಗಳೂರಿನಲ್ಲಿ ಸಂಬಂಧಪಟ್ಟ ಸಚಿವರು, ಅಧಿಕಾರಿಗಳ ಉನ್ನತ ಮಟ್ಟದ ಸಭೆ ಕರೆದು ಚರ್ಚಿಸಿ, ಕ್ರಮ ತೆಗೆದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ನಿಮ್ಮ ನೋವನ್ನು ಅರ್ಥ ಮಾಡಿಕೊಂಡು ಪರಿಹಾರ ಕಂಡುಕೊಳ್ಳಲು ಇಲ್ಲಿಗೆ ಬಂದಿದ್ದೇನೆ. ಆದುದರಿಂದ ಕಳೆದ 10 ದಿನಗಳಿಂದ ನಡೆಸುತ್ತಿರುವ ಈ ಧರಣಿಯನ್ನು ಇಲ್ಲಿಗೆ ಕೈಬಿಡಬೇಕು. ಆ ಮೂಲಕ ನಾವೆಲ್ಲ ಜೊತೆಜೊತೆಯಾಗಿ ಸಾಗಬೇಕು ಎಂದು ಖಾದರ್ ಮನವಿ ಮಾಡಿದರು.

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ಮಾತನಾಡಿ, ಧರಣಿ ಅಂತ್ಯಗೊಳಿಸುವ ಬಗ್ಗೆ ಒಕ್ಕೂಟದ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಕೊರಗ ಸಮುದಾಯದ ಮುಖಂಡರಾದ ಸಂಜೀವ, ಶೇಖರ್, ಬೊಗ್ರ ಕೊಕ್ಕರ್ಣೆ, ಪುತ್ರನ್ ಹೆಬ್ರಿ, ಪವಿತ್ರ ಮೊದಲಾದವರು ಉಪಸ್ಥಿತರಿದ್ದರು.