ತಮಿಳುನಾಡಿನಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಪ್ರತಿ ಮಗುವಿಗೂ 1 ಗ್ರಾಂ ಚಿನ್ನದ ಉಂಗುರ: ಯೋಜನೆಯ ಷರತ್ತುಗಳೇನು?

ಚೆನ್ನೈ: ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ತಮಿಳುನಾಡು ಸರ್ಕಾರವು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಪ್ರತಿಯೊಂದು ನವಜಾತ ಶಿಶುವಿಗೂ 1 ಗ್ರಾಂ ಚಿನ್ನದ ಉಂಗುರವನ್ನು ಉಚಿತವಾಗಿ ನೀಡುವ ‘ತೈಮಾಮನ್ ತಂಗ ಮೋತಿರಾಂ ತಿಟ್ಟಂ’ (Thai Maman Gold Ring Scheme) ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಘೋಷಿಸಿದೆ.

ತಮಿಳುನಾಡಿನಲ್ಲಿ ಶಾಶ್ವತವಾಗಿ ವಾಸಿಸುವ ಕುಟುಂಬಗಳ ಮಕ್ಕಳಿಗೆ ಈ ಯೋಜನೆ ಅನ್ವಯವಾಗಲಿದ್ದು, ಮುಖ್ಯಮಂತ್ರಿ ವಿಜಯ್ ಅವರ ಜನ್ಮದಿನವಾದ ಜೂನ್ 22ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ಮಾಜಿ ಮುಖ್ಯಮಂತ್ರಿ ಸಿಎನ್ ಅಣ್ಣಾದುರೈ C. N. Annadurai ಅವರ ಜನ್ಮದಿನವಾದ ಸೆಪ್ಟೆಂಬರ್ 15ರಂದು ಯೋಜನೆಗೆ ಅಧಿಕೃತ ಚಾಲನೆ ದೊರೆಯಲಿದೆ.

ಪ್ರಸ್ತುತ ಮಾರುಕಟ್ಟೆ ದರದ ಪ್ರಕಾರ ಸುಮಾರು ₹13,600 ಮೌಲ್ಯದ 1 ಗ್ರಾಂ ಚಿನ್ನದ ಉಂಗುರವನ್ನು ಪ್ರತಿ ನವಜಾತ ಶಿಶುವಿಗೆ ನೀಡಲಾಗುತ್ತದೆ. ಈ ಯೋಜನೆಗಾಗಿ ಸರ್ಕಾರವು ವಾರ್ಷಿಕವಾಗಿ ₹755.83 ಕೋಟಿ ಮೀಸಲಿಟ್ಟಿದೆ.

‘ತೈಮಾಮನ್ ಸೀರ್’ ಸಂಪ್ರದಾಯಕ್ಕೆ ಸರ್ಕಾರಿ ಸ್ಪರ್ಶ

ತಮಿಳುನಾಡಿನಲ್ಲಿ ಮಗು ಜನಿಸಿದಾಗ ತಾಯಿಯ ಸಹೋದರ (ಸೋದರ ಮಾವ) ಕಡೆಯಿಂದ ಚಿನ್ನದ ಉಡುಗೊರೆ ನೀಡುವ ‘ತೈಮಾಮನ್ ಸೀರ್’ ಎಂಬ ಸಂಪ್ರದಾಯವಿದೆ. ಇದೇ ಸಂಪ್ರದಾಯವನ್ನು ಪ್ರತೀಕಾತ್ಮಕವಾಗಿ ಅಳವಡಿಸಿಕೊಂಡಿರುವ ಸರ್ಕಾರ, ಪ್ರತಿಯೊಂದು ಮಗುವಿಗೂ ಚಿನ್ನದ ಉಂಗುರ ನೀಡಿ ಆ ಜವಾಬ್ದಾರಿಯನ್ನು ಹೊರುವುದಾಗಿ ತಿಳಿಸಿದೆ.

ಯಾರಿಗೆ ಸಿಗಲಿದೆ ಲಾಭ?

  • ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಎಲ್ಲಾ ಮಕ್ಕಳಿಗೆ ಯೋಜನೆ ಅನ್ವಯ.
  • ಗಂಡು ಅಥವಾ ಹೆಣ್ಣು ಮಗು ಎಂಬ ಭೇದವಿಲ್ಲ.
  • ಮೊದಲ, ಎರಡನೇ ಅಥವಾ ಮೂರನೇ ಮಗು ಎಂಬ ಮಿತಿಯಿಲ್ಲ.
  • ಫಲಾನುಭವಿಗಳು ತಮಿಳುನಾಡು ನಿವಾಸಿಗಳಾಗಿರಬೇಕು.
  • ರೇಷನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ಸಲ್ಲಿಕೆ ಕಡ್ಡಾಯ.

ಯಾರಿಗೆ ಸಿಗುವುದಿಲ್ಲ?

  • ಖಾಸಗಿ ನರ್ಸಿಂಗ್ ಹೋಮ್ ಅಥವಾ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಜನಿಸಿದ ಮಕ್ಕಳಿಗೆ ಯೋಜನೆ ಅನ್ವಯಿಸುವುದಿಲ್ಲ.
  • ಚಿನ್ನದ ಉಂಗುರದ ಬದಲಿಗೆ ನಗದು ಪಡೆಯಲು ಅವಕಾಶ ಇರುವುದಿಲ್ಲ.

ಅಂಕಿ-ಅಂಶಗಳು ಏನು ಹೇಳುತ್ತವೆ?

ತಮಿಳುನಾಡಿನಲ್ಲಿ ವರ್ಷಕ್ಕೆ ಸುಮಾರು 7.8 ಲಕ್ಷ ಮಕ್ಕಳ ಜನನವಾಗುತ್ತದೆ. ಇದರಲ್ಲಿ 4.2 ಲಕ್ಷ ಮಕ್ಕಳು ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುತ್ತಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ಸರಾಸರಿ ₹63 ಸಾವಿರ ವೆಚ್ಚವಾಗುತ್ತಿದ್ದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು ₹1,300 ಖರ್ಚಾಗಲಿದೆ. ಈ ಹೊಸ ಯೋಜನೆ ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡುವವರಿಗೆ ವರದಾನವಾಗಲಿದೆ.