ಕುಂದಾಪುರ: ಕಳೆದ ನವೆಂಬರ್ ತಿಂಗಳಿನಲ್ಲಿ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ನಡೆದ ಭೀಕರ ಅಗ್ನಿ ದುರಂತದಲ್ಲಿ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ ಬೋಟ್ ಮಾಲಕರಿಗೆ ರಾಜ್ಯ ಸರ್ಕಾರ 1.75 ಕೋಟಿ ಮಜೂರು ಮಾಡಿದೆ.
ಶಿರೂರಿನಲ್ಲಿ ಪ್ರವಾಹದಿಂದ ಹಾನಿಗೀಡಾದ ನಾಡದೋಣಿಗಳಿಗೆ ರೂ. 28 ಲಕ್ಷ ಪರಿಹಾರವನ್ನು ಮೀನುಗಾರರ ಸಂಕಷ್ಟ ಪರಿಹಾರನಿಧಿಯ ಮೂಲಕ ಮಂಜೂರು ಮಾಡಲಾಗಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮೀನುಗಾರಿಕೆ ಸಚಿವ ಮಾಂಕಾಳ ಎಸ್. ವೈದ್ಯ ಅಧ್ಯಕ್ಷತೆಯಲ್ಲಿ ನಡೆದ ಮೀನುಗಾರರ ಸಂಕಷ್ಟ ಪರಿಹಾರನಿಧಿ ಸಮಿತಿಯ ಸಭೆಯಲ್ಲಿ ಪ್ರಕರಣದಿಂದ ಸಮಸ್ಯೆಗೀಡಾದ ಮೀನುಗಾರರಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಚರ್ಚಿಸಿ ಪರಿಹಾರ ಮೊತ್ತವನ್ನು ಮಂಜೂರು ಮಾಡಲಾಗಿದೆ.
ಗಂಗೊಳ್ಳಿ ಬೋಟ್ ಅಗ್ನಿ ಅವಘಡದಿಂದ ಬೋಟ್ ಮಾಲಕರು ಆರ್ಥಿಕ ನಷ್ಟ ಎದುರಿಸಿ ಗಂಭೀರ ಸಮಸ್ಯೆ ಎದುರಿಸುತ್ತಿದ್ದು, ಈ ಘಟನೆಯನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಮುಖ್ಯಮಂತ್ರಿಗಳ ಪರಿಹಾರನಿಧಿಯ ಮೂಲಕ ಗರಿಷ್ಠ ಪರಿಹಾರ ಒದಗಿಸುವಂತೆ ಸಚಿವರಿಗೆ ಸಮಿತಿಯ ಸದಸ್ಯ ಶಾಸಕ ಯಶ್ ಪಾಲ್ ಸುವರ್ಣ ಮನವಿ ಮಾಡಿದ್ದಾರೆ.
ಕರಾವಳಿ ಜಿಲ್ಲೆಯ ಸಮಸ್ತ ಮೀನುಗಾರರ ಮನವಿಯನ್ನು ಪರಿಗಣಿಸಿ ಪರಿಹಾರ ಮಂಜೂರಾತಿಗೆ ವಿಶೇಷ ಮುತುವರ್ಜಿವಹಿಸಿದ ಮೀನುಗಾರಿಕಾ ಸಚಿವ ಮಾಂಕಾಳ ಎಸ್. ವೈದ್ಯ, ಗರಿಷ್ಠ ಪರಿಹಾರಕ್ಕೆ ಸರಕಾರವನ್ನು ಆಗ್ರಹಿಸಿದ ಸ್ಥಳೀಯ ಶಾಸಕಗುರುರಾಜ್ ಗಂಟಿಹೊಳೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಎಲ್ಲಾ ಜನಪ್ರತಿನಿಧಿಗಳಿಗೆ ಮೀನುಗಾರರ ಪರವಾಗಿ ಕೃತಜ್ಞತೆ ಸಲ್ಲಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.