ಗೃಹಜ್ಯೋತಿಯಿಂದ 1.3 ಲಕ್ಷ ಗ್ರಾಹಕರು ಹೊರಗೆ – ಅ. 31ರೊಳಗೆ ದಾಖಲೆ ಸಲ್ಲಿಸಲು ಬೆಸ್ಕಾಂನಿಂದ ಅವಕಾಶ

ಬೆಂಗಳೂರು: ಗೃಹಜ್ಯೋತಿ ಯೋಜನೆಯಿಂದ (Gruha Jyothi Scheme) 1.3 ಲಕ್ಷ ಗ್ರಾಹಕರು ಹೊರಗುಳಿದಿದ್ದಾರೆ ಎಂಬ ವಿಚಾರ ಚರ್ಚೆಗೆ ಬಂದಿದೆ. ಆದರೆ, ಈ ಗ್ರಾಹಕರನ್ನು ಯೋಜನೆಯಿಂದ ತಿರಸ್ಕರಿಸಿಲ್ಲ, ಬದಲಿಗೆ ವಿವಿಧ ಕಾರಣಗಳಿಂದ ಸಮೀಕ್ಷೆಯಲ್ಲಿ ಭಾಗಿಯಾಗಿಲ್ಲ ಅಷ್ಟೇ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ವಿವಿಧ ಕಾರಣಗಳಿಂದ ಗೃಹಜ್ಯೋತಿ ಯೋಜನೆಯ ಸಮೀಕ್ಷೆಯಲ್ಲಿ ಭಾಗಿಯಾಗದ ಗ್ರಾಹಕರಿಗೆ ಬೆಸ್ಕಾಂ ಮತ್ತೊಂದು ಅವಕಾಶ ನೀಡಿದೆ. ವಿಶೇಷವಾಗಿ, ಅಪಾರ್ಟ್‌ಮೆಂಟ್‌ಗಳಿಗೆ ಸಮೀಕ್ಷೆ ನಡೆಸಲು ತೆರಳಿದ ಬೆಸ್ಕಾಂ ಸಿಬ್ಬಂದಿಗೆ ಪ್ರವೇಶ ಸಿಗದ ಹಿನ್ನೆಲೆಯಲ್ಲಿ ಹಲವು ನಿವಾಸಿಗಳು ಸಮೀಕ್ಷೆಯಿಂದ ವಂಚಿತರಾಗಿದ್ದಾರೆ.

ಹೀಗಾಗಿ, ಗೃಹಜ್ಯೋತಿ ಫಲಾನುಭವಿಗಳು ತಮ್ಮ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಬೆಸ್ಕಾಂ ಅವಕಾಶ ಕಲ್ಪಿಸಿದೆ. ಅಕ್ಟೋಬರ್ 31ರೊಳಗೆ ಗ್ರಾಹಕರು ತಮ್ಮ ವ್ಯಾಪ್ತಿಯ ಬೆಸ್ಕಾಂ ಉಪವಿಭಾಗ ಕಚೇರಿಗೆ ತೆರಳಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ಸಮೀಕ್ಷೆಯಲ್ಲಿ ಭಾಗಿಯಾಗದ ಗ್ರಾಹಕರು ನಿಗದಿತ ಗಡುವಿನೊಳಗೆ ದಾಖಲೆಗಳನ್ನು ಸಲ್ಲಿಸಿದರೆ ಗೃಹಜ್ಯೋತಿ ಯೋಜನೆಯ ಸೌಲಭ್ಯವನ್ನು ಮುಂದುವರಿಸಲು ಅವಕಾಶವಿದೆ ಎಂದು ಬೆಸ್ಕಾಂ ತಿಳಿಸಿದೆ. ದಾಖಲೆಗಳನ್ನು ಸಲ್ಲಿಸದ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಈ ಬಗ್ಗೆ ಸೂಚನೆಯನ್ನೂ ನೀಡಿದೆ.