ಹೊಸದಿಲ್ಲಿ: ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿದ್ದ ಕೆಎಲ್ ರಾಹುಲ್ ಅವರು ಮುಂದಿನ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡಲಿದ್ದಾರೆ. ಇತ್ತೀಚೆಗೆ ನಡೆದ ಐಪಿಎಲ್ ಹರಾಜಿನಲ್ಲಿ ಕೆಎಲ್ ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಡೆದುಕೊಂಡಿದೆ. ಅದಕ್ಕಾಗಿ ಫ್ರಾಂಚೈಸಿಯು 14 ಕೋಟಿ ರೂ ಖರ್ಚು ಮಾಡಿದೆ.
ಮೂರು ವರ್ಷಗಳ ನಂತರ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದಿಂದ ಬೇರ್ಪಟ್ಟಿದ್ದಾರೆ. ಅದರ ನಂತರ ಎಲ್‌ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ ಅವರು ವೈಯಕ್ತಿಕ ಗುರಿಗಳಿಗಿಂತ ತಂಡಕ್ಕೆ ಆದ್ಯತೆ ನೀಡುವ ಆಟಗಾರರನ್ನು ಮಾತ್ರ ಉಳಿಸಿಕೊಂಡಿದ್ದೇವೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಇದೀಗ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಸಹ-ಮಾಲೀಕ ಪಾರ್ಥ್ ಜಿಂದಾಲ್ ಅವರು ರಾಹುಲ್ ತಮ್ಮ ಹೊಸ ತಂಡದಿಂದ “ಪ್ರೀತಿ ಮತ್ತು ಗೌರವ” ವನ್ನು ಬಯಸುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ.
“ಅವರು (ರಾಹುಲ್) ʼʼನಾನು ಕ್ರಿಕೆಟ್ ಆಡಲು ಬಯಸುತ್ತೇನೆ. ನಾನು ಫ್ರಾಂಚೈಸಿಯಿಂದ ಪ್ರೀತಿ ಮತ್ತು ಬೆಂಬಲವನ್ನು ಪಡೆಯಲು ಬಯಸುತ್ತೇನೆ. ನಾನು ಗೌರವವನ್ನು ಪಡೆಯಲು ಬಯಸುತ್ತೇನೆ ಮತ್ತು ನಾನು ನಿಮ್ಮಿಂದ ಅದನ್ನು ಪಡೆಯುತ್ತೇನೆ ಎಂದು ತಿಳಿದಿದ್ದೇನೆ. ನಾನು ಸ್ನೇಹಿತರಿಗಾಗಿ ಆಡಲು ಮತ್ತು ಡಿಸಿ ತಂಡವನ್ನು ಗೆಲ್ಲುವಂತೆ ಮಾಡಲು ಹೆಚ್ಚು ಉತ್ಸುಕನಾಗಿದ್ದೇನೆ. ನಾನು ಎಂದಿಗೂ (ಐಪಿಎಲ್) ಗೆದ್ದಿಲ್ಲ. ದೆಹಲಿ ಯಾವತ್ತೂ ಗೆದ್ದಿಲ್ಲ. ಇದನ್ನು ಒಟ್ಟಿಗೆ ಮಾಡೋಣ” ಎಂದು ಹೇಳಿದರು” ಎಂದು ಸಂದರ್ಶನವೊಂದರಲ್ಲಿ ಪಾರ್ಥ್ ಜಿಂದಾಲ್ ಹೇಳಿದರು.
ಜಿಂದಾಲ್ ಅವರು ಸ್ವತಃ ಬೆಂಗಳೂರು ಎಫ್‌ಸಿಯ ಮಾಲೀಕರಾಗಿರುವುದರಿಂದ ಬೆಂಗಳೂರಿನ ರಾಹುಲ್ ಅವರೊಂದಿಗೆ ಹಿಂದೆಯೂ ಸಮಯ ಕಳೆದಿದ್ದೇನೆ ಎಂದು ಬಹಿರಂಗಪಡಿಸಿದರು.