ಹೈದರಾಬಾದ್; ಸಂಜು ಸ್ಯಾಮ್ಸನ್ ಅಬ್ಬರ: ಚೊಚ್ಚಲ T20 ಅಂತಾರಾಷ್ಟ್ರೀಯ ಶತಕ

ಹೈದರಾಬಾದ್ : ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ(ಅ18) ನಡೆಯುತ್ತಿರುವ ಸರಣಿಯ 3 ನೇ ಮತ್ತು ಕೊನೆಯ ಟಿ 20 ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಸ್ಪೋಟಕ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಬ್ಯಾಟರ್ ಗಳ ಅಬ್ಬರಿದಿಂದ 6 ವಿಕೆಟ್ ನಷ್ಟಕ್ಕೆ 297 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು. ಇದು ಟಿ 20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಎರಡನೇ ಅತೀ ದೊಡ್ಡ ಮೊತ್ತವಾಗಿದೆ.

ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಟಗಾರನಾಗಿ ಇಳಿದ ಸಂಜು ಸ್ಯಾಮ್ಸನ್ ಆರಂಭದಿಂದಲೇ ಅಬ್ಬರಿಸಿ 40 ಎಸೆತಗಳಲ್ಲಿ ಶತಕ ಪೂರೈಸಿದರು. 9 ಬೌಂಡರಿ ಮತ್ತು 8 ಸಿಕ್ಸರ್ ಗಳನ್ನು ಗ್ರೌಂಡ್ ನ ಮೂಲೆ ಮೂಲೆಗೆ ಚಚ್ಚಿ ಶತಕ ಪೂರೈಸಿದರು. ಇದು ಭಾರತೀಯ ಬ್ಯಾಟರ್ ಒಬ್ಬರ ಎರಡನೇ ಅತೀ ವೇಗದ ಶತಕವಾಗಿದೆ. 111 ರನ್ ಗಳಿಸಿ ಸ್ಯಾಮ್ಸನ್ ಔಟಾದರು. ರೋಹಿತ್ ಶರ್ಮ ಅವರು 35 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿರುವ ದಾಖಲೆಯನ್ನು ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಅವರೊಂದಿಗೆ ಹೊಂದಿದ್ದಾರೆ.

ಅಭಿಷೇಕ್ ಶರ್ಮ 4 ರನ್ ಗಳಿಸಿ ಔಟಾದರು. ಆ ಬಳಿಕ ಸ್ಯಾಮ್ಸನ್ ಅವರಿಗೆ ನಾಯಕ ಸೂರ್ಯ ಕುಮಾರ್ ಯಾದವ್ ಜತೆಯಾದರು. ಇಬ್ಬರು, ಬಾಂಗ್ಲಾ ಬೌಲರ್ ಗಳನ್ನು ಮನ ಬಂದಂತೆ ದಂಡಿಸಿದರು. ಸೂರ್ಯ ಕುಮಾರ್ 75 ರನ್ (35ಎಸೆತ) ಗಳಿಸಿ ಔಟಾದರು. 8 ಬೌಂಡರಿ ಮತ್ತು 5 ಸಿಕ್ಸರ್ ಸಿಡಿಸಿದರು. ರಿಯಾನ್ ಪರಾಗ್ 34 ರನ್ (13ಎಸೆತ) ಗಳಿಸಿ ಔಟಾದರು. ಹಾರ್ದಿಕ್ ಪಾಂಡ್ಯ ಅವರೂ ಸಿಡಿಲಬ್ಬರ ತೋರಿದರು.18 ಎಸೆತಗಳಲ್ಲಿ 47 ರನ್ ಗಳಿಸಿದ್ದ ವೇಳೆ ಕ್ಯಾಚಿತ್ತು ನಿರ್ಗಮಿಸಿದರು.

ನೇಪಾಳ ತಂಡ ಮಂಗೋಲಿಯಾ ವಿರುದ್ಧ ದಾಖಲಿಸಿದ 314 ರನ್ ಇದುವರೆಗಿನ ಅತ್ಯಧಿಕ ಮೊತ್ತವಾಗಿದೆ. ಭಾರತ ತಂಡಕ್ಕೆ ಆ ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ!. ಆದರೆ ಟೆಸ್ಟ್ ಆಡುವ ರಾಷ್ಟ್ರಗಳಲ್ಲಿ ಭಾರತದ ದಾಖಲೆ ಮೊದಲನೆಯದಾಗಿದೆ.

ಭಾರತ ಸರಣಿಯ ಎರಡೂ ಪಂದ್ಯಗಳನ್ನು ಈಗಾಗಲೇ ಗೆದ್ದಿದೆ.