ಹೈದರಾಬಾದ್: ಅಕ್ಕಿನೇನಿ ನಾಗಾರ್ಜುನ್ (Akkineni Nagarjuna) ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ನಾಗ ಚೈತನ್ಯ – ಶೋಭಿತಾ ವಿವಾಹಕ್ಕೆ ಅಕ್ಕಿನೇನಿ ಕುಟುಂಬ ಸಜ್ಜಾಗಿದೆ. ಆತ್ಮೀಯರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯುವ ವಿವಾಹಕ್ಕೆ ದಿನಗಣನೆ ಶುರುವಾಗಿದೆ.
ಇತ್ತೀಚೆಗೆ ನಾಗಚೈತನ್ಯ (Naga Chaitanya) ಮತ್ತು ಶೋಭಿತಾ ಧೂಳಿಪಾಲ (Sobhita Dhulipala) ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ. ಇದೇ ಡಿಸೆಂಬರ್ನಲ್ಲಿ ಅನ್ನಪೂರ್ಣ ಸ್ಟುಡಿಯೋಸ್ ನಲ್ಲಿ ವಿವಾಹ ಸಮಾರಂಭ ನಡೆಯಲಿದೆ.
ಈ ನಡುವೆ ಇತ್ತೀಚೆಗೆ ನಾಗಚೈತನ್ಯ ಸಹೋದರ ಅಖಿಲ್ ಅಕ್ಕಿನೇನಿ (Akhil Akkineni) ಗೆಳತಿ ಝೈನಾಬ್ ರಾವಡ್ಜಿ ( Zainab Ravdjee) ಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೋವನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ.
ಅಖಿಲ್ ಎಂಗೇಜ್ಮೆಂಟ್ ಬಳಿಕ ಟಾಲಿವುಡ್ನಲ್ಲಿ ಹೊಸ ರೂಮರ್ಸ್ವೊಂದು ಹರಿದಾಡಿದೆ. ಸಹೋದರ ನಾಗಚೈತನ್ಯ ಮದುವೆ ದಿನವೇ ಅಖಿಲ್ ಕೂಡ ಮದುವೆ ಆಗಲಿದ್ದಾರೆ ಎನ್ನುವ ಮಾತುಗಳು ಹರಿದಾಡಿದೆ.
ಈ ಬಗ್ಗೆ ನಾಗಾರ್ಜುನ್ ಅವರೇ ಸಂದರ್ಶನವೊಂದರಲ್ಲಿ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ. “ನಾನು ಅಖಿಲ್ಗೆ ತುಂಬಾ ಸಂತೋಷವಾಗಿದ್ದೇನೆ. ಅವನ ಗೆಳತಿ ಝೈನಾಬ್ ಒಳ್ಳೆಯ ಹುಡುಗಿ. ಅವರಿಬ್ಬರು ತಮ್ಮ ಜೀವನವನ್ನು ಒಟ್ಟಿಗೆ ಕಳೆಯಲು ನಿರ್ಧರಿಸಿದ್ದಾರೆಂದು ತಿಳಿಯಲು ನನಗೆ ತುಂಬಾ ಸಂತೋಷವಾಗಿದೆ. ಅವರ ಮದುವೆ 2025 ರಲ್ಲಿ ನಡೆಯಲಿದೆ” ಎಂದಿದ್ದಾರೆ.
ಡಿಸೆಂಬರ್ 4 ರಂದು ನಾಗಚೈತನ್ಯ – ಶೋಭಿತಾ ವಿವಾಹ ನೆರವೇರಲಿದೆ. ಈ ಸಮಾರಂಭಕ್ಕೆ ಎಸ್ ಎಸ್ ರಾಜಮೌಳಿ, ಮಹೇಶ್ ಬಾಬು ಅವರ ಕುಟುಂಬ, ರಾಣಾ ದಗ್ಗುಬಾಟಿ, ಮೆಗಾ ಕುಟುಂಬ ಸೇರಿದಂತೆ ಇತರರು ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ.