ಹೆಬ್ರಿ: ವಿದ್ಯಾರ್ಥಿಗಳಾದ ನಿಮ್ಮಲ್ಲಿ ನಿಮ್ಮ ಅಧ್ಯಯನ ನಿಮ್ಮ ಕಲಿಕೆ ನಿಮ್ಮನ್ನು ಬೇರೆಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ನೀವು ಯಾವುದೇ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಲು ಸಾಹಿತ್ಯ ಪೂರಕವಾಗಿದೆ ಎಂದು ಹೆಬ್ರಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀನಿವಾಸ್ ಭಂಡಾರಿ ಹೇಳಿದರು.
ಇವರು, ಎಸ್.ಆರ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಂಘ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ನಾವು ನಮ್ಮ ಜೀವನದಲ್ಲಿ ಆದರ್ಶ ವ್ಯಕ್ತಿಗಳನ್ನು ಮಾದರಿಯಾಗಿಸಿಕೊಂಡು ನಮ್ಮ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಬೇಕು. ಆ ಮೂಲಕ ವ್ಯಾಸಂಗ ಮಾಡಿದ ಶಿಕ್ಷಣ ಸಂಸ್ಥೆಗೆ, ಬೆಳೆದ ಊರಿಗೆ ಸಮಾಜಕ್ಕೆ ಕೊಡುಗೆಯನ್ನು ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್ ನಾಗರಾಜ್ ಶೆಟ್ಟಿ ಮಾತನಾಡಿ, ಗುರುಗಳು ಹೇಳಿದ ಮಾತುಗಳು, ಸಮಾಜದ ಹಿರಿಯರು, ಯೋಗ್ಯ ವ್ಯಕ್ತಿಗಳು ಆಡಿದ ಮಾತುಗಳನ್ನು ನಮ್ಮ ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕು. ಹಿರಿಯರ, ಸಾಹಿತಿಗಳ ಮೌಲ್ಯಯುತ ಮಾತುಗಳನ್ನು ವಿದ್ಯಾರ್ಥಿಗಳು ಪಾಲಿಸಿದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ. ನಮ್ಮ ಭವಿಷ್ಯದ ಬಗ್ಗೆ ಉತ್ತಮ ಕನಸ್ಸುಗಳನ್ನು ಇಟ್ಟುಕೊಂಡು ಶ್ರದ್ಧೆಯಿಂದ ಕಾರ್ಯಪ್ರವೃತ್ತರಾದರೆ ಯಶಸ್ಸು ಲಭಿಸುತ್ತದೆ. ಸಾಹಿತ್ಯ ಕ್ಷೇತ್ರದ ಆಸಕ್ತಿ, ಸಾಹಿತ್ಯಿಕ ಓದು ಕರ್ನಾಟಕದ ಸಂಸ್ಕೃತಿ, ನಾಡು-ನುಡಿಯ ಅರಿವನ್ನು ಮೂಡಿಸಲು ಸಹಕಾರಿ ಎಂದು ಹೇಳಿದರು.
ಈ ಸಂದರ್ಭ ವೇದಿಕೆಯಲ್ಲಿ ಎಸ್.ಆರ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್, ಕನ್ನಡ ಸಾಹಿತ್ಯ ಸಂಘ ಮತ್ತು ಸಾಂಸ್ಕೃತಿಕ ಸಂಘದ ಸಂಚಾಲಕರಾದ ದೀಪಕ್ ಎನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನ್ನಡ ಭಾಷಾ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ವಿದ್ಯಾರ್ಥಿಗಳಾದ ಪ್ರಿಯಾನಿ.ಜಿ ಗೌಡ ಕಾರ್ಯಕ್ರಮ ನಿರೂಪಿಸಿ, ದೀಪಿಕಾ ಅತಿಥಿ ಪರಿಚಯ ಮಾಡಿ, ದೀಪಕ್ ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಪ್ರಗತಿ ವಂದಿಸಿದರು.