ಹೆಬ್ರಿಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಾಹಿತಿ ಕೇಂದ್ರ ಉದ್ಘಾಟನೆ.

ಹೆಬ್ರಿ: ಬೇರೆ ಬೇರೆ ಪ್ರದೇಶಗಳಲ್ಲಿ ಸುಮಾರು 150ಕ್ಕೂ ಮಿಕ್ಕಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಾಹಿತಿ ಕೇಂದ್ರವನ್ನು ತೆರೆಯಲಾಗಿದ್ದು, ಇದೀಗ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಬ್ರಿಯ ಚಾಣಕ್ಯ ಸಂಸ್ಥೆಯಲ್ಲಿ ಮಣಿಪಾಲ ಆಸ್ಪತ್ರೆಯ ಮಾಹಿತಿ ಕೇಂದ್ರವನ್ನು ತೆರೆಯಲಾಗಿದೆ ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಅಧಿಕಾರಿ ಮೋಹನ್ ಶೆಟ್ಟಿ ಹೇಳಿದರು.

ಅವರು ಜೂ.12 ರಂದು ಹೆಬ್ರಿ ಎಸ್.ಆರ್.ಸ್ಕೂಲ್ ಬಳಿ ಇರುವ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನಲ್ಲಿ ಆರಂಭಗೊಂಡ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಇದರ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ :
ಗ್ರಾಮೀಣ ಪ್ರದೇಶ ಜನರು ಮಣಿಪಾಲ ಆಸ್ಪತ್ರೆಗೆ ಬಂದರೆ ಗಂಟೆ ಕಟ್ಟಲೆ ಸರತಿ ಸಾಲಿನಲ್ಲಿ ನಿಂತು ಕಾಯುವ ಪರಿಸ್ಥಿತಿಯನ್ನು ತಪ್ಪಿಸಲು ಈ ಮಾಹಿತಿ ಕೇಂದ್ರವನ್ನು ತೆರೆಯಲಾಗಿದ್ದು, ಇಲ್ಲಿ ವಿವಿಧ ವಿಭಾಗದಲ್ಲಿ ವೈದ್ಯರ ಲಭ್ಯತೆ ಬಗ್ಗೆ ಮಾಹಿತಿ, ನೋಂದಣಿ, ಮಣಿಪಾಲ ಆರೋಗ್ಯ ಕಾರ್ಡ್ ಸೇವೆ ಲಭ್ಯವಿದೆ.

ಮೊದಲ ದಿನವೇ ತಾವು ಭೇಟಿ ಮಾಡುವ ವೈದ್ಯರಿಗೆ ಫೈಲ್ ನ್ನು ನೋಂದಣಿ ಮಾಡುವುದರ ಮೂಲಕ ಶೀಘ್ರ ಸಂದರ್ಶನ ಪಡೆಯಬಹುದಾಗಿದೆ. ಅಲ್ಲದೆ ಆಸ್ಪತ್ರೆಯಲ್ಲಿ ರೆಫರೆಲ್ ಡೆಸ್ಕ್ ಮೂಲಕ ರೋಗಿಗಳಿಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತಿದೆ ಎಂದರು.

ಮಣಿಪಾಲ ಆರೋಗ್ಯ ಕಾರ್ಡ್ ನೋಂದಣಿ :
ಹೆಬ್ರಿಯ ಮಾಹಿತಿ ಕೇಂದ್ರದಲ್ಲಿ ಮಣಿಪಾಲ್ ಆರೋಗ್ಯ ಕಾರ್ಡ್ ನೊಂದಣಿಗೆ ಅವಕಾಶವಿದೆ. ಒಂದು ವರ್ಷ ಹಾಗೂ ಎರಡು ವರ್ಷ ಅವಧಿಯ ವೈಯಕ್ತಿಕ ಮತ್ತು ಕೌಟುಂಬಿಕ ಕಾರ್ಡ್ ಮಾಡಬಹುದಾಗಿದ್ದು ಹೆಚ್ಚಿನ ಮಾಹಿತಿಗಾಗಿ ಹೆಬ್ರಿ ಮಾಹಿತಿ ಕೇಂದ್ರವನ್ನು ಸಂಪರ್ಕಿಸಬಹುದು ಎಂದರು.

ಜನರಿಗೆ ಅನುಕೂಲವಾಗಿದೆ:
ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ತಾರನಾಥ್ ಬಂಗೇರ ಮಾತನಾಡಿ ಇಂತಹ ಸೌಲಭ್ಯವನ್ನು ತಾಲೂಕು ಕೇಂದ್ರವಾದ ಹೆಬ್ರಿಯಲ್ಲಿ ಕಲ್ಪಿಸುವುದರಿಂದ ಜನರಿಗೆ ತುಂಬಾ ಅನುಕೂಲವಾಗಲಿದೆ ಎಂದರು.

ನಿರಂತರ ಆರೋಗ್ಯ ತಪಾಸಣೆ ಮಾಡಿಸಿ
ಆರೋಗ್ಯದ ಬಗ್ಗೆ ನಿರ್ಲಕ್ಷದಿಂದ ಕಾಯಿಲೆ ದೊಡ್ಡದಾಗಿ ಜೀವಕ್ಕೆ ಆಪತ್ ಆಗಬಹುದು. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಗಾಗ ಆರೋಗ್ಯ ತಪಾಸಣೆಯನ್ನು ಮಾಡಿಕೊಳ್ಳಬೇಕು. ಮಣಿಪಾಲ್ ಆರೋಗ್ಯ ಕಾರ್ಡ್ ಇದ್ದಲ್ಲಿ ಕಡಿಮೆ ವೆಚ್ಚದಲ್ಲಿ ಆರೋಗ್ಯ ತಪಾಸಣೆಯನ್ನು ಮಾಡಿಕೊಳ್ಳಲು ಸಾಧ್ಯ ಈ ನಿಟ್ಟಿನಲ್ಲಿ ಹೆಬ್ರಿಯಲ್ಲಿ ಇಂತಹ ಒಂದು ವ್ಯವಸ್ಥೆ ಸಿಕ್ಕಿರುವುದು ಜನಸಾಮಾನ್ಯರಿಗೆ ಅನುಕೂಲವಾಗಿದೆ ಎಂದು ಚಾರ ಗ್ರಾ. ಪಂ. ಅಧ್ಯಕ್ಷ ದಿನೇಶ್ ಶೆಟ್ಟಿ ಹೇಳಿದರು.

ಈ ಸಂದರ್ಭದಲ್ಲಿ ಹೆಬ್ರಿ ಜೆಸಿಐ ಅಧ್ಯಕ್ಷೆ ರಕ್ಷಿತಾ ಪಿ. ಭಟ್, ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ರಘುರಾಮ್ ಶೆಟ್ಟಿ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಅನಿಲ್, ಸಂದೀಪ್, ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ, ಚಾಣಕ್ಯ ಸಂಸ್ಥೆಯ ಗೌರವ ಸಲಹೆಗಾರ ನಿತ್ಯಾನಂದ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಹೆಬ್ರಿಯ ಚಾಣಕ್ಯ ಎಜುಕೇಶನ್ ಮತ್ತು ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರುಪಿಸಿ, ವಂದಿಸಿದರು.