ಉಡುಪಿ: ಅಂಬಲಪಾಡಿ ಜಂಕ್ಷನ್‌ನಲ್ಲಿ ಕಾಮಗಾರಿ ಆರಂಭವಾಗಿದ್ದು, ಗುತ್ತಿಗೆದಾರರು ಒಂದೂವರೆ ವರ್ಷದೊಳಗೆ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದಾರೆ. ಈ ಕಾಮಗಾರಿಯಿಂದ ಯಾರಿಗೂ ಸಮಸ್ಯೆ ಆಗುವುದಿಲ್ಲ. ಆದುದರಿಂದ ಇದಕ್ಕೆ ಆಕ್ಷೇಪ ಸಲ್ಲಿಸುವುದು ಸರಿಯಲ್ಲ ಎಂದು ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ 66ರ ಬಳಕೆದಾರರ ವೇದಿಕೆ ಸಂಚಾಲಕ ಭಾಸ್ಕರ ಶೆಟ್ಟಿ ಹೇಳಿದರು.
ಅಂಬಲಪಾಡಿ ಜಂಕ್ಷನ್ ಮೇಲ್ಸೇತುವೆ ಅಂಡರ್ ಪಾಸ್ ಕಾಮಗಾರಿಯಿಂದ ಆಗಿರುವ ಗೊಂದಲದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹೆದ್ದಾರಿ ಕಾಮಗಾರಿ ನಡೆಯುವಾಗ ಸಂಚಾರದಲ್ಲಿ ತೊಂದರೆ ಆಗುವುದು ಸಾಮಾನ್ಯ. ಅದಕ್ಕೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿಯಿಂದಾಗಿ ಉಡುಪಿಯಿಂದ ಅಂಬಲಪಾಡಿ ಹೋಗುವ ಪಾದಚಾರಿಗಳಿಗೆ ರಸ್ತೆ ದಾಟಲು ತುಂಬಾ ತೊಂದರೆ ಆಗುತ್ತಿದೆ. ಸಂತೆಕಟ್ಟೆಯಲ್ಲಿ ಇದೇ ಸಮಸ್ಯೆಯನ್ನು ಪಾದಾಚಾರಿ ಗಳು ನಾಲ್ಕೈದು ವರ್ಷಗಳ ಕಾಲ ಅನುಭವಿಸಿದರು.
ಆ ಸಮಸ್ಯೆ ಇಲ್ಲಿ ಆಗಬಾರದು. ಅದಕ್ಕಾಗಿ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಬೇಕು. ಅದೇ ರೀತಿ ಇಲ್ಲಿ ಯಾವುದೇ ಸೂಚನಾ ಫಲಕ ಇಲ್ಲದೆ ಇರುವುದರಿಂದ ಸಮಸ್ಯೆ ಆಗುತ್ತಿದೆ ಎಂದು ಅಂಬಲಪಾಡಿ ನಿವಾಸಿ ಶ್ಯಾಮ್ ಕುಮಾರ್ ರಾವ್ ಹೇಳಿದರು.