ಉಡುಪಿ: ಏಡ್ಸ್ ರೋಗ ಹರಡುವಿಕೆ, ಅವುಗಳ ಲಕ್ಷಣಗಳ ಬಗ್ಗೆ ಅರಿವು ಹೊಂದಿ ಎಚ್ಚರವಹಿಸಿದಾಗ ಮಾತ್ರ ಈ ರೋಗದಿಂದ ದೂರವಿರಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.
ಅವರು ನಗರದ ಮಣಿಪಾಲದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಅನಂತ ನಗರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಹೆಚ್.ಐ.ವಿ/ಏಡ್ಸ್ ಅರಿವಿನ ಮಾಸಾಚರಣೆ ಮತ್ತು ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಯುವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಯುವ ಪೀಳಿಗೆಯು ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸುವ ಮೂಲಕ ಕಾರ್ಯಕ್ರಮದಲ್ಲಿ ದೊರಕುವ ಮಾಹಿತಿಯನ್ನು ಪಡೆದುಕೊಂಡು ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಯುವಜನತೆಯು ಏಡ್ಸ್ ಕಾಯಿಲೆಗೆ ತುತ್ತಾಗಿರುವುದನ್ನು ನಾವು ಕಾಣಬಹುದಾಗಿದೆ. ಎಚ್.ಐ.ವಿ ತಗುಲಿದರೆ, ಅದರ ಸಮಸ್ಯೆಯನ್ನು ಜೀವನ ಪರ್ಯಾಂತ ಎದುರಿಸುವುದರೊಂದಿಗೆ ಅದರ ಜೊತೆಗೆ ಬದುಕಬೇಕಾಗುತ್ತದೆ. ಆದ್ದರಿಂದ ಕಾಯಿಲೆಯು ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವುದರೊಂದಿಗೆ ಪ್ರತಿಯೊಬ್ಬರಲ್ಲೂ ಈ ಕುರಿತು ಜಾಗೃತಿ ಮೂಡಿಸಬೇಕು ಎಂದರು. ರಕ್ತದಾನ ಎಲ್ಲಾ ದಾನಕ್ಕಿಂತ ಶ್ರೇಷ್ಠ ದಾನವಾಗಿದ್ದು, ಅಪಘಾತ ಹಾಗೂ ಇತರೆ ಕಾಯಿಲೆಗಳ ಕಾರಣಗಳಿಂದ ಸಾವನಪ್ಪುವ ಒಬ್ಬ ವ್ಯಕ್ತಿಯ ಜೀವವನ್ನು ಕಾಪಾಡುವಲ್ಲಿ ರಕ್ತದಾನವು ಪ್ರಮುಖವಾಗಿದೆ. ಯುವಜನತೆ ರಕ್ತದಾನದಂತಹ ಕಾರ್ಯಗಳಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಕ್ರಾಂತಿ ನಮ್ಮ ಬದುಕನ್ನು ಆವರಿಸಿಕೊಂಡಿದೆ. ಡಿಜಿಟಲ್ ಬಳಕೆಯಿಂದ ಉಂಟಾಗುವ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮಗಳನ್ನು ಅರಿತು ಕೊಳ್ಳಬೇಕು. ಸುಸ್ಥಿರ ಅಭಿವೃದ್ಧಿಗೆ ಡಿಜಿಟಲ್‌ನ ಬಳಕೆ ಬಹು ಮುಖ್ಯ ಪಾತ್ರ ವಹಿಸುತ್ತದೆ. ಡಿಜಿಟಲ್ ಬಳಕೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಪ್ರತಿಯೊಬ್ಬರೂ ಹೊಂದಿರಬೇಕು ಎಂದರು.
ಅನುಷ್ಠಾನ ಅಧಿಕಾರಿ ಡಾ.ಚಿದಾನಂದ ಸಂಜು.ಎಸ್.ವಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರವು ಜನರಿಗೆ ಎಚ್.ಐ.ವಿ. ಏಡ್ಸ್ ಹಾಗೂ ಆರೋಗ್ಯ ಸಂಬಂಧಿತ ವಿಷಯಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಪ್ರತಿಯೊಬ್ಬರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡು ತಮ್ಮ ಕುಟುಂಬಕ್ಕೂ ಹಾಗೂ ಸಮುದಾಯಕ್ಕೂ ತಿಳಿಸಬೇಕು ಎಂದರು. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲೆ ಸಹನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ನಶಾ ಮುಕ್ತ ಭಾರತದ ಪ್ರತಿಜ್ಞಾ ವಿಧಿ ಬೋಧಿಸಿದರು.
ಹೆಚ್.ಐ.ವಿ ಏಡ್ಸ್ ಕುರಿತು ಗೂಗಲ್ ಆನ್‌ಲೈನ್ ಲಿಂಕ್ ಮೂಲಕ ಇ-ಕ್ವಿಜ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ ಗಡಾದ್, ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ವೀಣಾಕುಮಾರಿ, ರೋಟರಿಯ ಅಧ್ಯಕ್ಷ ಟಿ. ಗುರುರಾಜ ಭಟ್, ಲಯನ್ಸ್ ಕ್ಲಬ್‌ನ ಅಧ್ಯಕ್ಷ ಲಯನ್ಸ್ ರಘುನಾಥ ನಾಯಕ, ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕಿ ವಂದನಾ ಸ್ವಾಗತಿಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮೇಲ್ವಿಚಾರಕ ಮಹಾಬಲೇಶ್ವರ ನಿರೂಪಿಸಿದರೆ, ಶಿವಪ್ರಸಾದ್ ವಂದಿಸಿದರು.